ಶಿರಸಿ (ಉತ್ತರ ಕನ್ನಡ) :ಜಿಲ್ಲೆಯ ಶಿರಸಿಯಲ್ಲಿಂದು 6 ಪ್ರಕರಣ ದೃಢಪಟ್ಟಿವೆ. ಇದರಲ್ಲಿ ಸಬ್ ಜೈಲಿನಲ್ಲಿರುವ ಆರೋಪಿಗೂ ಸೇರಿ ಆಸ್ಪತ್ರೆಯ ಸಿಬ್ಬಂದಿಗೂ ಕೊರೊನಾ ಹಬ್ಬಿದೆ.
ದ್ವಿಚಕ್ರ ಕಳ್ಳತನದ ಆರೋಪಿಯ ಪ್ರಾಥಮಿಕ ಸಂಪರ್ಕದಿಂದ ಶಿರಸಿ ಸಬ್ ಜೈಲಿನಲ್ಲಿರುವ ಮೂವರು ಖೈದಿಗಳಿಗೆ ಸೋಂಕು ತಗುಲಿದೆ. ಅಲ್ಲದೆ ಆರೋಪಿ ಭೇಟಿ ನೀಡಿದ್ದ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯಲ್ಲೂ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಶಿರಸಿಯಲ್ಲಿ ಮತ್ತೆ ಆರು ಜನರಿಗೆ ಕೊರೊನಾ.. ಜೈಲಿನಲ್ಲಿದ್ದ 3 ಆರೋಪಿಗಳಿಗೂ ಸೋಂಕು? ತಾಲೂಕಿನ ಸುಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಹೋಮ್ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಯೋರ್ವರಿಗೆ ಸೋಂಕು ತಗುಲಿದೆ. ಇವರೆಲ್ಲರ ಟ್ರಾವೆಲ್ ಹಿಸ್ಟರಿ ಆಡಳಿತಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇರುವವರ ಗಂಟಲು ದ್ರವ ಸಂಗ್ರಹಣೆ ಕಾರ್ಯ ನಡೆದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ ನಗರದ ಖಾಸಗಿ ಆಸ್ಪತ್ರೆಯೊಂದನ್ನೂ ಸಹ ಬಂದ್ ಮಾಡಲಾಗಿದೆ. ಇದರಿಂದ ಕಳೆದ ಎರಡು ದಿನಗಳಿಂದ ಮೂರು ಖಾಸಗಿ ಆಸ್ಪತ್ರೆ ಸೀಲ್ಡೌನ್ ಆದಂತಾಗಿದ್ದು, ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ.