ಕಾರವಾರ: ಕೇಂದ್ರ ಸರಕಾರದ 'ಒಂದು ಭಾರತ ಒಂದು ತುರ್ತು ಕರೆ ಸಂಖ್ಯೆ' ಪರಿಕಲ್ಪನೆಯಡಿ ದೇಶದಾದ್ಯಂತ ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ -112(ERSS) ಎಂಬ ಯೋಜನೆ ಜಾರಿಗೊಳಿಸಿದ್ದು, ಇನ್ನು ಮುಂದೆ ಜಿಲ್ಲೆಯಲ್ಲಿಯೂ ಎಲ್ಲ ರೀತಿಯ ತುರ್ತು ಸೇವೆಗಳನ್ನು 100 ಸಂಖ್ಯೆಯ ಬದಲಾಗಿ 112 ಸಂಖ್ಯೆಗೆ ಕರೆ ಮಾಡಿದರೇ ಅಗತ್ಯ ತುರ್ತು ಸೇವೆಗಳನ್ನು ಪಡೆಯಬಹುದಾಗಿದೆ.
ಈ ಸಂಬಂಧ ಉತ್ತರಕನ್ನಡ ಜಿಲ್ಲೆಗೆ 16 ಇಆರ್ಎಸ್ಎಸ್ ವಾಹನಗಳನ್ನು ನೀಡಿದ್ದು, ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ತುರ್ತು ಸಂದರ್ಭದಲ್ಲಿ ಸಾರ್ವಜನಿಕರು 112 ನಂಬರಿಗೆ ಕರೆ ಮಾಡಿದರೆ, ಬೆಂಗಳೂರಿನಲ್ಲಿ ಇರುವ ಮುಖ್ಯ ಕಚೇರಿಗೆ ಮೊದಲು ಈ ಕರೆ ಹೋಗುತ್ತದೆ. ಅದಾದ 15 ಸೆಕೆಂಡ್ನಲ್ಲಿ ಅಲ್ಲಿನ ಸಿಬ್ಬಂದಿ ಈ ಮೊದಲೇ ಕಂಪ್ಯೂಟರಿನಲ್ಲಿ ಸೇರಿಸಲಾಗಿರುವ ಜಿಪಿಎಸ್ ಮೂಲಕ ಸಂಬಂಧಿತ ಜಿಲ್ಲೆಗೆ ಮತ್ತು ಆ ಜಿಲ್ಲೆಯಲ್ಲಿ ಕರೆ ಬಂದಿರುವ ಸ್ಥಳಕ್ಕೆ ಸಮೀಪದಲ್ಲಿರುವ 112 ವಾಹನಕ್ಕೆ ಮಾಹಿತಿ ರವಾನೆಯಾಗುತ್ತದೆ. ಜಿಲ್ಲೆಗೆ 16 ವಾಹನಗಳು ಬಂದಿದ್ದು, ಈ ಮೂಲಕ ಜನರ ಮನೆ ಬಾಗಿಲಿಗೆ ಪೊಲೀಸ್ ಸೇವೆ ಒದಗಿಸಲಾಗುತ್ತಿದೆ ಎಂದರು.
ಉತ್ತರ ಕನ್ನಡಕ್ಕೆ 16 ಇಆರ್ಎಸ್ಎಸ್ ವಾಹನಗಳು ಪ್ರತಿಯೊಂದು ವಾಹನದಲ್ಲಿ ತಲಾ ಒಬ್ಬ ಎಎಸ್ಐ, ಒಬ್ಬ ಮುಖ್ಯ ಪೇದೆ ಇಲ್ಲವೇ ಪೇದೆ, ಒಬ್ಬ ಚಾಲಕ ಇರುತ್ತಾರೆ. ಪ್ರತಿದಿನ ಮೂರು ಶಿಫ್ಟ್ ಗಳಲ್ಲಿ ಈ ವಾಹನ ಸೇವೆ ನೀಡುತ್ತದೆ. ಇದರಿಂದಾಗಿ ಜನ ದೂರು ನೀಡಲು ಪೊಲೀಸ್ ಠಾಣೆಗೆ ಬರುವುದು ಶೇ. 30 ರಿಂದ ಶೇ. 40 ರಷ್ಟು ಕಡಿಮೆಯಾಗಲಿದೆ. ಈ ವಾಹನದಲ್ಲಿ ಬರುವ ಎಎಸ್ಐ ಕೂಡಲೇ ದೂರು ದಾಖಲಿಸಿಕೊಳ್ಳುವುದರಿಂದ ದೂರು ಪಡೆಯಲು ತಗಲುವ ಸಮಯ ಉಳಿತಾಯವಾಗಲಿದ್ದು, ವಿಳಂಬ ಎಂಬ ಆರೋಪವೂ ಕಡಿಮೆಯಾಗಲಿವೆ. ಈ ಸೇವೆಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಕೊಟ್ಟಿಲ್ಲ. ಆದರೆ, ಇರುವ ಸಿಬ್ಬಂದಿಯಲ್ಲಿಯೇ ಈ ಯೋಜನೆಗೆ ಅವಕಾಶ ಕಲ್ಪಿಸಲಾಗಿದೆ. ಎಲ್ಲಿ ಏನೇ ಅಪಘಾತ, ಗಲಾಟೆ,ಮನೆ ಜಗಳ, ಹೊಡೆದಾಟ ಇನ್ಯಾವುದೆ ಅಪರಾಧ ಕೃತ್ಯ ನಡೆದರೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬೇಕಾಗಿಲ್ಲ. ನಿಮ್ಮ ಮಿತ್ರ 112 ಕರೆ ಮಾಡಿದ್ದರೆ ಸಾಕು ಅವರೇ ನೇರವಾಗಿ ನೀವು ಇರುವ ಸ್ಥಳಕ್ಕೆ ಬರಲಿದ್ದಾರೆ ಎಂದರು.