ಉಡುಪಿ:ಅಷ್ಟಮಿಯಂದು, ಮಾದವನ ಜನ್ಮದಿನವನ್ನು ಸಂಭ್ರಮಿಸಿದ ಉಡುಪಿ ಜನ, ಮೊಸರು ಕುಡಿಕೆ ಉತ್ಸವದಲ್ಲಿ ಕೃಷ್ಣನ ಲೀಲೆ ಕಂಡು ಧನ್ಯರಾದರು. ಸ್ವರ್ಣ ರಥದಲ್ಲಿ ಕೃಷ್ಣನ ರಥೋತ್ಸವ ಜೊತೆಗೆ, ರಥಬೀದಿಯ ಸುತ್ತಲೂ ಕಟ್ಟಿದ ಮೊಸರು ಕುಡಿಕೆಯನ್ನು ಗೊಲ್ಲ ವೇಷಧಾರಿಗಳು ಒಡೆಯುವ ಅಂದವನ್ನು ಕಂಡು ಭಕ್ತರು ಪುನೀತರಾದರು.
ಉಡುಪಿ ಜಿಲ್ಲೆಗೆ ಅಷ್ಟಮಿ ಹಾಗೂ ಮರುದಿನ ನಡೆಯುವ ಮೊಸರು ಕುಡಿಕೆ ಉತ್ಸವ ದೊಡ್ಡ ಹಬ್ಬ. ಮೊಸರು ಕುಡಿಕೆ ಉತ್ಸವವನ್ನು ವಿಟ್ಲಪಿಂಡಿ ಉತ್ಸವ ಅಂತಲೂ ಕರೆಯುತ್ತಾರೆ. ಅಷ್ಟಮಿ ಬಂದಿತೆಂದರೆ ನಗರದ ಬೀದಿ ಬೀದಿಗಳಲ್ಲಿ ತಾಸೆ ಸದ್ದು, ಹುಲಿ ಕುಣಿತ ಹಾಗೂ ವಿವಿಧ ವೇಷಗಳ ಅಬ್ಬರ ಜೋರಾಗಿರುತ್ತೆ. ಆದರೆ, ಈ ಬಾರಿ ಸರಳವಾಗಿಯೇ ಅಷ್ಟಮಿ ಆಚರಿಸಿ, ಕೃಷ್ಣನ ಲೀಲೋತ್ಸವ ಸಾರುವ ವಿಟ್ಲಪಿಂಡಿ ಉತ್ಸವ ಆಚರಿಸಿದರು. ಪ್ರತಿವರ್ಷ ಲಕ್ಷಾಂತರ ಭಕ್ತರು ಭಾಗವಹಿಸುವ ಕಾರ್ಯಕ್ರಮದಲ್ಲಿ ಈ ವರ್ಷ ಸೀಮಿತ ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.