ಉಡುಪಿ:ಜಿಲ್ಲೆಯಲ್ಲಿ ನಡೆದ ಹೊಳಪು ಕ್ರೀಡಾಕೂಟದ ಸಭಾ ಕಾರ್ಯಕ್ರಮದಲ್ಲಿ ವಿನಯ್ ಗುರೂಜಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಪೆನ್ನನ್ನು ತಮ್ಮ ಅಂಗೈಯಲ್ಲಿರಿಸಿಕೊಂಡು ಹತ್ತು ಸೆಕೆಂಡುಗಳ ಕಾಲ ಪ್ರಾರ್ಥನೆ ಮಾಡಿ ನೀಡಿರುವ ದೃಶ್ಯ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.
ಕಟೀಲ್ಗೆ ಪ್ರಾರ್ಥಿಸಿದ ಪೆನ್ನು ಕೊಟ್ಟ ವಿನಯ್ ಗುರೂಜಿ ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷರ ಬದಲಾವಣೆಯಾಗುತ್ತೆ ಅನ್ನುವ ಊಹಾಪೋಹ ಹಬ್ಬಿದೆ. ಭಾನುವಾರ ಉಡುಪಿಯಲ್ಲಿ ನಡೆದ 'ಹೊಳಪು' ಕ್ರೀಡಾಕೂಟದಲ್ಲಿ ನಳಿನ್ ಕುಮಾರ್ ಕಟೀಲ್ ಭಾಗವಹಿಸಿದ್ದರು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರು ಈ ಸಭೆಯಲ್ಲಿ ಎಂದಿನಂತೆ ಲವಲವಿಕೆಯಿಂದ ಇರಲಿಲ್ಲ. ಸಭೆ ಮುಗಿಸಿ ತಕ್ಷಣವೇ ಹೊರಟ ಕಟೀಲ್, ಮಾಧ್ಯಮದವರು ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಪ್ರಶ್ನೆ ಮಾಡಿದಾಗಲೂ ಯಾವುದೇ ಉತ್ತರ ನೀಡದೇ ವಾಪಸ್ ಆಗಿದ್ದರು.
ಆದರೆ, ಹೊಳಪು ಕ್ರೀಡಾಕೂಟದ ಸಭಾ ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ ಪಕ್ಕದಲ್ಲೇ ಅವಧೂತ ವಿನಯ್ ಗುರೂಜಿ ಕುಳಿತಿದ್ದರು. ಇಬ್ಬರ ನಡುವೆ ಹೆಚ್ಚೇನು ಮಾತುಕತೆ ನಡೆದಿರಲಿಲ್ಲ. ಈ ನಡುವೆ ಕಟೀಲ್ ಕಿಸೆಯಿಂದ ಪೆನ್ನನ್ನು ತೆಗೆದು ಅದೇನೋ ಬರೆದುಕೊಳ್ಳುತ್ತಾರೆ. ತಕ್ಷಣ ಇದನ್ನು ಗಮನಿಸಿದ ವಿನಯ್ ಗುರೂಜಿ, ಅವರ ಕೈಯಿಂದ ಪೆನ್ನನ್ನು ಪಡೆದು ತನ್ನ ಅಂಗೈಯಲ್ಲಿರಿಸಿಕೊಂಡು ಹತ್ತು ಸೆಕೆಂಡುಗಳ ಕಾಲ ಅದೇನೋ ಪ್ರಾರ್ಥನೆ ಮಾಡುತ್ತಾರೆ. ಬಳಿಕ ತಾನು ಪ್ರಾರ್ಥಿಸಿದ ಪೆನ್ನನ್ನು ಕಟೀಲ್ಗೆ ವಾಪಸ್ ನೀಡುತ್ತಾರೆ. ವಿನಯ ಗುರೂಜಿ ಅವರ ವರ್ತನೆಯಿಂದ ಪುಳಕಿತಗೊಂಡ ನಳಿನ್, ಅವರಿಗೆ ನಮಸ್ಕರಿಸಿ ಪೆನ್ನನ್ನು ಪಡೆಯುತ್ತಾರೆ.
ಸದ್ಯ, ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದೆ. ಕಟೀಲ್ ಹುದ್ದೆ ಅಪಾಯದಲ್ಲಿ ಇರೋದು ನಿಜವಾದರೆ, ವಿನಯ್ ಗುರೂಜಿ ಪ್ರಾರ್ಥಿಸಿ ಕೊಟ್ಟ ಪೆನ್ನು ನಳಿನ್ ಸ್ಥಾನವನ್ನು ಭದ್ರಪಡಿಸುತ್ತಾ ಕಾದು ನೋಡಬೇಕು.
ಓದಿ:ದೊಡ್ಡ ಪ್ರಮಾಣದಲ್ಲಿ ವೆಚ್ಚ ಮಾಡಿದ್ದರೂ ಹಲವು ಬೃಹತ್ ಕಾಮಗಾರಿಗಳು ಇನ್ನೂ ಅಪೂರ್ಣ: ಸಿಎಜಿ ವರದಿ ಆಕ್ಷೇಪ