ಉಡುಪಿ: ಈ ಆಸ್ಪತ್ರೆಗೆ ಸಾವಿರಾರು ಮಂದಿ ಬಂದು ಉಚಿತ ಚಿಕಿತ್ಸೆ ಪಡೆಯುತ್ತಿದ್ದರು. ಸಹಕಾರದ ಸಹಭಾಗಿತ್ವ ಇದ್ರೂ ಆಸ್ಪತ್ರೆ ಉಸ್ತುವಾರಿ ಹೊತ್ತಿರುವವರು ಪ್ರಸಿದ್ಧ ಉದ್ಯಮಿ ಬಿ.ಆರ್ ಶೆಟ್ಟಿ. ಕಳೆದ ಕೆಲವು ಸಮಯದಿಂದ ಸದಾ ಒಂದಲ್ಲೊಂದು ಸಮಸ್ಯೆ ಇರುತ್ತಿದ್ದ ಈ ಆಸ್ಪತ್ರೆಯಲ್ಲಿ ನಿನ್ನೆ ವೈದ್ಯರು, ನರ್ಸ್ಗಳು ತಮ್ಮ ಕರ್ತವ್ಯ ನಿರ್ವಹಿಸದೇ ಸಂಬಳಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ರೋಗಿಗಳು ಕಂಗಾಲಾಗಿದ್ದರು.
ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉಡುಪಿ ಜಿಲ್ಲೆಯ ಸುಸಜ್ಜಿತ ಆಸ್ಪತ್ರೆಗಳಲ್ಲಿ ಒಂದು. ಅದರಲ್ಲೂ ಬಿಲ್ಲಿಂಗ್ ವಿಭಾಗ ಇಲ್ಲದೇ ಇರುವ ಉತ್ತಮ ಆಸ್ಪತ್ರೆ ಎಂಬ ಹೆಸರು ಕೂಡ ಇದಕ್ಕಿದೆ. ಇತ್ತೀಚೆಗೆ ಇದೇ ಆಸ್ಪತ್ರೆಯಲ್ಲಿ 10,000 ಮಕ್ಕಳು ಹೆರಿಗೆಯಾದ ಸಂಭ್ರಮ ಕೂಡ ಆಚರಿಸಿತ್ತು.
ಈ ಆಸ್ಪತ್ರೆಗೆ ಜಾಗವನ್ನು ಒಪ್ಪಂದದ ಪ್ರಕಾರ ಸರ್ಕಾರವು, ಉಡುಪಿ ಮೂಲದ ಬಹುಕೋಟಿ ಉದ್ಯಮಿ ಬಿ. ಆರ್ ಶೆಟ್ಟಿ ಅವರಿಗೆ ನೀಡಿತು. ಇದರಲ್ಲಿ ಸುಸಜ್ಜಿತ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಿಸಿದ ಬಿ.ಆರ್.ಶೆಟ್ಟಿ ಉತ್ತಮವಾಗಿ ಆಸ್ಪತ್ರೆ ನಡೆಸಿಕೊಂಡು ಬರುತ್ತಿದ್ದರು. ಆದ್ರೆ ಇತ್ತೀಚೆಗೆ ಉದ್ಯಮಿ ಬಿ.ಆರ್ ಶೆಟ್ಟಿ ಅವರಿಗೆ ಆರ್ಥಿಕ ಕುಸಿತ ಕಾಣುತ್ತಿದ್ದಂತೆ, ಆಸ್ಪತ್ರೆಯಲ್ಲೂ ಒಂದೊಂದೇ ಸಮಸ್ಯೆ ಶುರುವಾಯಿತು.
ಇತ್ತೀಚಿಗೆ ಇಲ್ಲಿನ ಡಿ ದರ್ಜೆ ನೌಕರರು ಸಂಬಳ ನೀಡಿಲ್ಲ ಎಂದು ಮುಷ್ಕರ ನಡೆಸಿದ್ದರು. ನಂತರ ಹಾಗೋ ಹೀಗೋ ಎಂದು ಸಮಸ್ಯೆ ಹೇಗೋ ಸರಿ ಆಯ್ತು. ಇದೀಗ ಮತ್ತೆ ಅಂದರೆ ನಿನ್ನೆ ಸಂಬಳ ಕೊಟ್ಟಿಲ್ಲ ಎಂದು ವೈದ್ಯರು, ನರ್ಸ್ಗಳ ಸಹಿತ ಎಲ್ಲ ಸಿಬ್ಬಂದಿ ಸಂಬಳಕ್ಕಾಗಿ ಪ್ರತಿಭಟನೆ ನಡೆಸಿದರು. ಸಂಬಳ ಕೊಟ್ಟರೆ ಮಾತ್ರ ಕೆಲಸ, ನಮಗೂ ಕುಟುಂಬವಿದೆಯೆಂದು ಹಠಕ್ಕೆ ಬಿದ್ದರು. ಇದರಿಂದ ಗೊಂದಲಕ್ಕೆ ಒಳಗಾಗಿ ಆಸ್ಪತ್ರೆಗೆ ಬಂದವರು ಮುಷ್ಕರ ನಿರತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೀಗಾದರೆ ರೋಗಿಗಳ ಸ್ಥಿತಿ ಏನು ಅಂತಾ ಆತಂಕದ ವಾತಾವರಣ ನಿರ್ಮಾಣವಾಗಿತ್ತು.