ಉಡುಪಿ : ಮುಂದುವರೆದ ತೌಕ್ತೆ ಚಂಡಮಾರುತ ಅಬ್ಬರಕ್ಕೆ ಕರಾವಳಿಗರ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹಿಂದೆಂದೂ ಕಂಡಿರದಷ್ಟು ಅಲೆಗಳ ಆರ್ಭಟ ಮುಂದುವರಿದಿದ್ದು, ಪಶ್ಚಿಮ ಕರಾವಳಿಯ ಉದ್ದಕ್ಕೂ ಅಲೆಗಳ ಆರ್ಭಟ ಜೋರಾಗಿದೆ.
ಮಲ್ಪೆ-ಪಡುಕೆರೆ ನಿವಾಸಿಗಳನ್ನು ಸ್ಥಳಾಂತರ ಮಾಡುವ ಚಿಂತನೆ ಮಾಡುತ್ತಿದ್ದು, ಪಡುಕೆರೆ ಮೀನುಗಾರಿಕಾ ರಸ್ತೆಗಳನ್ನು ಸಮುದ್ರದ ಅಲೆಗಳು ದಾಟಿ ಮುನ್ನುಗ್ಗುತ್ತಿದೆ.
ಕಡಲ ತೀರದ ನಿವಾಸಿಗಳಿಗೆ ಅಪಾಯ ಎದುರಾಗಿದ್ದು, ಸ್ಥಳಕ್ಕೆ ಶಾಸಕ ರಘುಪತಿ ಭಟ್ ಪಡುಕೆರೆ ಮೀನುಗಾರರ ನಿವಾಸಗಳಿಗೆ ಭೇಟಿ ನೀಡಿದ್ದಾರೆ. ತೀರದ ನಿವಾಸಿಗಳ ಸ್ಥಳಾಂತರಕ್ಕೆ ಮನವೊಲಿಕೆ ಮಾಡುತ್ತಿದ್ದು, ರಾತ್ರಿಯ ನಂತರ ಮತ್ತೆ ನೀರಿನ ಅಬ್ಬರ ಇರುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಸುರಕ್ಷಿತ ಸ್ಥಳಕ್ಕೆ ರವಾನಿಸಲು ಚಿಂತನೆ ನಡೆಯುತ್ತಿದೆ.
ಮಲ್ಪೆಯ ಏಳೂರು ಮೊಗವೀರ ಭವನದಲ್ಲಿ ಕಾಳಜಿ ಕೇಂದ್ರ ಆರಂಭವಾಗಿದ್ದು, ಇಲ್ಲೇ ಸಂತ್ರಸ್ತರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು, ನಾಳೆ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮುಂದುವರಿಕೆಯಾಗಿದೆ.
ಅಪಾಯದಲ್ಲಿ ಕಾಪು ಲೈಟ್ ಹೌಸ್ ತೀರ ಪ್ರದೇಶ :ಉಡುಪಿ ಜಿಲ್ಲೆಯ ಕಾಪು ಲೈಟ್ ಹೌಸ್ ತೀರ ಪ್ರದೇಶದಲ್ಲಿ ಕಡಲ ಅಬ್ಬರ ಜೋರಾಗಿದೆ. ಸಮುದ್ರದ ಅಲೆಗಳು ತೆಂಗಿನ ಮರಗಳನ್ನು ಉರುಳಿಸುತ್ತಿದೆ. ಸ್ಥಳೀಯರು ಮೀನುಗಾರಿಕಾ ಶೆಡ್‌ಗಳ ಸ್ಥಳಾಂತರ ಮಾಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಬಲೆ, ಟಬ್, ಹಗ್ಗ, ಐಸ್ ಬಾಕ್ಸ್ ಶಿಫ್ಟ್ ಮಾಡಲಾಗುತ್ತಿದೆ. ತಡೆಗೋಡೆಗೆ ಅಪ್ಪಳಿಸುತ್ತಿರುವ ಅಲೆಗಳ ಅಬ್ಬರದಿಂದ ಕಾಪು ಕಡಲ ಸಮೀಪದಲ್ಲೂ ಜನರ ಸ್ಥಳಾಂತರ ಮಾಡಲಾಗುತ್ತಿದೆ.