ಉಡುಪಿ: ಕುಂಟು ಕಾಲಿಗೆ ಚಕ್ರ ಸಿಕ್ಕಿಸಿಕೊಂಡು ಓಡಾಡುವ ನಾಯಿ ಮರಿಯ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಈ ನಾಯಿಯ ಸದ್ಯದ ಸಂತೋಷದ ಹಿಂದಿನ ಸಂಕಟದ ಕಥೆ ರೋಚಕವಾಗಿದೆ.
ಅಪಘಾತದಲ್ಲಿ ಗಾಯಗೊಂಡು ಬೀದಿಯಲ್ಲಿ ಬಿದ್ದಿದ್ದ ಪುಟ್ಟ ನಾಯಿ ಮರಿಗೆ 'ಮರುಜೀವ' ಜಿಲ್ಲೆಯ ಗಡಿಭಾಗದಲ್ಲಿರುವ ಹೊಸಂಗಡಿ ಕೆಪಿಸಿಎಲ್ ಘಟಕದ ಆವರಣದಲ್ಲಿ ಪುಟ್ಟ ನಾಯಿ ಮರಿಯೊಂದು ಗಾಯಗೊಂಡು ಬಿದ್ದಿತ್ತು. ಬೈಕ್ ಅಪಘಾತದಿಂದ ಅದರ ಹಿಂಬದಿಯ ಎರಡು ಕಾಲುಗಳು ಸಂಪೂರ್ಣ ಜಜ್ಜಿ ಹೋಗಿದ್ದವು. ಹೀಗಾಗಿ ಅಸಹಾಯಕ ಸ್ಥಿತಿಯಲ್ಲಿ 15 ದಿನಗಳಿಂದ ರಸ್ತೆ ಬದಿಯಲ್ಲೇ ಬಿದ್ದಿದ್ದ ನಾಯಿ ಮರಿಗೆ ಕೆಪಿಸಿಎಲ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಕೆ.ರಾಮಸ್ವಾಮಿ ಹಾಗೂ ವೀಣಾ ದಂಪತಿಯ ಪುತ್ರಿ ಪ್ರಿಯಾ ಬದುಕು ನೀಡಿದ್ದಾರೆ.
ಒಂದು ದಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪ್ರಿಯಾ, ನೋವಿನಿಂದ ನರಳುತ್ತಿದ್ದ ನಾಯಿಮರಿಯನ್ನು ಗಮನಿಸಿದ್ದಾರೆ. ಬಳಿಕ ಆ ನಾಯಿಮರಿ ಕುಂಟು ಕಾಲಿನಲ್ಲೇ ಅವರನ್ನು ಹಿಂಬಾಲಿಸಿಕೊಂಡು ಮನೆಯವರೆಗೂ ಬಂದಿದೆ. ಬಳಿಕ ಪ್ರಿಯಾ ಅವರು, ವೈದ್ಯರನ್ನು ಕರೆಸಿ ನಾಯಿಗೆ ಚಿಕಿತ್ಸೆ ಕೊಡಿಸಿದರು. ಆದರೆ, ವೈದ್ಯರು ಈ ನಾಯಿ ಮರಿ ಬದುಕುವ ಸಾಧ್ಯತೆ ಇಲ್ಲ ಎಂದಿದ್ದರು.
ಸಂಪೂರ್ಣ ಇನ್ಫೆಕ್ಷನ್ಗೆ ತುತ್ತಾಗಿದ್ದ ಎರಡೂ ಕಾಲುಗಳಿಗೆ ಮತ್ತೆ ಜೀವ ತರುವುದು ಅಸಾಧ್ಯವಾಗಿತ್ತು. ಬೀದಿ ನಾಯಿಗಳನ್ನು ಕಂಡರೆ ಮೊದಲೇ ಪ್ರಿಯಾಗೆ ಎಲ್ಲಿಲ್ಲದ ಪ್ರೀತಿ. ಈ ಹಿಂದೆ ಅನೇಕ ಬೀದಿ ನಾಯಿಗಳನ್ನು ಆಕೆ ಆರೈಕೆ ಮಾಡಿದ್ದರು. ನಾಯಿ ಮತ್ತೆ ಹಿಂದಿನಂತೆ ಓಡಾಡಬೇಕು ಎಂದು ಆಲೋಚಿಸಿದ ರಾಮಸ್ವಾಮಿ, ಆನ್ಲೈನ್ನಲ್ಲಿ ಎರಡು ಪುಟ್ಟ ಚಕ್ರಗಳನ್ನು ತರಿಸಿದ್ದಾರೆ. ಬಳಿಕ ಪಿವಿಸಿ ಪೈಫ್ಗೆ ಪುಟ್ಟಪುಟ್ಟ ಗಾಲಿಗಳನ್ನು ಜೋಡಿಸಿ, ನಾಯಿಯ ಹಿಂದಿನ ಎರಡು ಕಾಲುಗಳ ಚಲನೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಈ ಕೃತಕ ಕಾಲು ನಿರ್ಮಾಣವಾದ ನಂತರ ಸಾವಿನ ಹೊಸ್ತಿಲಲ್ಲಿದ್ದ ಪುಟ್ಟ ನಾಯಿಮರಿ ಮತ್ತೆ ಲವಲವಿಕೆಯಿಂದ ಓಡಾಡಿಕೊಂಡಿದೆ. ಬದುಕಲು ಸಾಧ್ಯವೇ ಇಲ್ಲ ಎಂದು ಭಾವಿಸಿದ್ದ ನಾಯಿ, ಎಲ್ಲೆಂದರಲ್ಲಿ ಓಡಾಡುತ್ತಾ ತನಗೆ ಮರುಜೀವ ಕೊಟ್ಟ ಕುಟುಂಬದವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದೆ.
ಇದನ್ನೂ ಓದಿ:ಸುಪ್ರೀಂಕೋರ್ಟ್ ಎಚ್ಚರಿಕೆಗೆ ಮಣಿದ ಆಂಧ್ರ ಸರ್ಕಾರ: 10,12ನೇ ತರಗತಿ ಪರೀಕ್ಷೆ ರದ್ದು