ಕುಂದಾಪುರ: ನಗರದಲ್ಲಿ ಮೊಬೈಲ್ ಶೋ ರೂಮ್ ಅನ್ನು ಹೊಂದಿರುವ ವ್ಯಕ್ತಿಯನ್ನು ಅಪಹರಿಸಿ ನಗದು ಹಾಗೂ ದಾಖಲೆಗಳನ್ನು ಸುಲಿಗೆ ಮಾಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. ಮೂಲತಃ ನಾವುಂದ ಅರೆಹೊಳೆಯವರಾದ ಮುಸ್ತಫಾ(34) ಕಳೆದ ಕೆಲವು ವರ್ಷಗಳಿಂದ ಕುಂದಾಪುರ ಚಿಕನ್ ಸ್ಟಾಲ್ ತಿರುವಿನಲ್ಲಿರುವ ವಾಣಿಜ್ಯ ಕಾಂಪ್ಲೆಕ್ಸ್ ಒಂದರಲ್ಲಿ ಮೊಬೈಲ್ x ಹೆಸರಿನ ಮೊಬೈಲ್ ಶೋ ರೂಮ್ ನಡೆಸುತ್ತಿದ್ದಾರೆ.
ನಗರದ ದತ್ತಾತ್ರೇಯ ವಸತಿ ಸಂಕೀರ್ಣದಲ್ಲಿ ಫ್ಲ್ಯಾಟ್ ಒಂದರಲ್ಲಿ ವಾಸವಿರುವ ತನ್ನನ್ನು ಮುಕ್ತಾರ್ ಹಾಗೂ ಇತರ ಐವರು ಅಪಹರಣ ಮಾಡಿ 4 ಲಕ್ಷದ 64 ಸಾವಿರದ ನೂರ ಎಪ್ಪತ್ತೈದು ರೂಪಾಯಿ ಹಣ ಹಾಗೂ 1 ಲಕ್ಷ ಮೌಲ್ಯದ ಸ್ವತ್ತುಗಳು ಮತ್ತು ಅಮೂಲ್ಯ ದಾಖಲಾತಿಗಳನ್ನು ಸುಲಿಗೆ ಮಾಡಿರುವ ಬಗ್ಗೆ ಇದೀಗ ಅಪಹರಣಕಾರರಿಂದ ಪಾರಾಗಿ ಬಂದಿರುವ ಮುಸ್ತಾಫಾ ಅವರು ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ವಿವರ ಹೀಗಿದೆ:
ಸೆ.17 ರಂದು ರಾತ್ರಿ 9.30ಕ್ಕೆ ತಾನು ಅಂಗಡಿ ವ್ಯವಹಾರ ಮುಗಿಸಿ ವ್ಯವಹಾರದ 50 ಸಾವಿರ ನಗದು, ಆಧಾರ್ ಕಾರ್ಡ್, ಪಾನ್ ಕಾರ್ಡ್, 3-4 ಬ್ಯಾಂಕ್‌ಗಳ ಚೆಕ್ ಪುಸ್ತಕಗಳು ಹಾಗೂ ಇನ್ನಿತರ ಅಮೂಲ್ಯ ದಾಖಲೆ ಹಾಗೂ ಐಫೋನ್, ಸ್ಯಾಮ್ಸಂಗ್ ಮೊಬೈಲ್ ಫೋನ್, ಆಪಲ್ ಸ್ಮಾರ್ಟ್ ವಾಚ್, ಏರ್ ಪೋಡ್ ಇವುಗಳನ್ನು ಬ್ಯಾಗ್ನಲ್ಲಿ ಹಾಕಿ ಹೊರಟೆ. ದ್ವಿಚಕ್ರ ವಾಹನದಲ್ಲಿ ತನ್ನ ವಾಸದ ಫ್ಯ್ಲಾಟ್ ಸಮೀಪ ಹೋಗುತ್ತಿದ್ದಾಗ ಒಂದು ಸ್ವಿಫ್ಟ್ ಕಾರು ಏಕಾಏಕಿ ಅಡ್ಡಲಾಗಿ ಬಂದು ನಿಂತಿತು.
ಅದರ ಚಾಲಕನ ಸೀಟಿನಲ್ಲಿ ಮುಖ್ತಾರ್ ಎಂಬ ಪರಿಚಿತ ಕುಳಿತು ಕೊಂಡಿದ್ದ. ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ಕಾರಿನಿಂದ ಇಳಿದು ಬಂದು ಹಲ್ಲೆ ಮಾಡಿ ಕಾರಿನ ಒಳಗೆ ಎಳೆದುಕೊಂಡಿದ್ದು, ಕಾರಿನಲ್ಲಿದ್ದ ಇನ್ನೋರ್ವ ಅಪರಿಚಿತ ವ್ಯಕ್ತಿ ಕೈಯಲ್ಲಿದ್ದ ರಿವಾಲ್ವರ್ ಅನ್ನು ತೋರಿಸಿ ಬೆದರಿಸಿದ್ದಾನೆಂದು ಮುಸ್ತಫಾ ದೂರಿನಲ್ಲಿ ತಿಳಿಸಿದ್ದಾರೆ.
ಓರ್ವ ಆರೋಪಿ ಮುಸ್ತಾಫಾ ಎಡಕಣ್ಣಿನ ಕೆಳಗೆ ಮುಷ್ಠಿಯಿಂದ ಬಲವಾಗಿ ಗುದ್ದಿ ಹಲ್ಲೆ ನಡೆಸಿ ಕೈಯನ್ನು ಹಾಗೂ ಬಾಯಿಯನ್ನು ಕಟ್ಟಿ ಕೂಗದಂತೆ ಮಾಡಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಕಾರಿನಲ್ಲಿ ತೆರಳುವ ಮಾರ್ಗಮಧ್ಯೆ ಓರ್ವ ಮಹಿಳೆ ಕಾರು ಏರಿದ್ದು, ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಮತ್ತಿಬ್ಬರು ಅಪರಿಚಿತ ಆರೋಪಿಗಳು ಇವರಿಗೆ ಜೊತೆಯಾಗಿದ್ದಾರೆ.
ಇದನ್ನೂ ಓದಿ:ಕಲಬುರಗಿ: ಧಾರಾಕಾರ ಮಳೆಯಿಂದ ಜಮೀನಿಗೆ ನುಗ್ಗಿದ ನೀರು.. ಕಂಗಾಲಾದ ರೈತರು
ದಾರಿ ಮಧ್ಯೆ ಹಣ ಡ್ರಾ ಮಾಡಿದ ಕಿಡ್ನಾಪರ್ಸ್
ಬೆಂಗಳೂರಿನ ಲಾಡ್ಜ್ ಅನ್ನು ಸೇರಿದ ಮೇಲೆ ಜೊತೆಗಿದ್ದ ಮಹಿಳೆ ತನ್ನ ಮೊಬೈಲ್‌ಗೆ ಮುಸ್ತಾಫಾ ಅವರ ಸಿಮ್ ಕಾರ್ಡ್ ಹಾಕಿ ಮನೆಯವರಿಗೆ ಕರೆ ಮಾಡಿಸಿ ಅವರಿಂದ ತಲಾ ಒಂದೊಂದು ಲಕ್ಷ ಮುಸ್ತಾಫಾ ಖಾತೆಗೆ ಹಾಕಿಸಿಕೊಂಡಿದ್ದು, ಮೊಬೈಲ್ ಮೂಲಕ ಬ್ಯಾಂಕ್ ಖಾತೆಯನ್ನು ಓಪನ್ ಮಾಡಿ ಅವಳ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಮಾತ್ರವಲ್ಲದೇ ಕುಂದಾಫುರದಿಂದ ಬೆಂಗಳೂರಿಗೆ ಹೋಗುವಾಗ ದಾರಿಮಧ್ಯೆಯಲ್ಲಿ ಬೆಂಗಳೂರಿನ ಎಟಿಎಮ್ ಹಾಗೂ ಸ್ವೈಪಿಂಗ್ ಮಷಿನ್ ನಿಂದ 3,14,175 /- ರೂ ಡ್ರಾ ಮಾಡಿದ್ದಾರೆ.
ಅಲ್ಲದೇ ಎಕ್ಸಿಸ್ ಬ್ಯಾಂಕ್‌ನ ಚೆಕ್ ಪುಸ್ತಕವನ್ನು ತೆಗೆದುಕೊಂಡು ಸಹಿ ಮಾಡಲು ಹೇಳಿ ನೀನು ಊರಿಗೆ ಹೋದ ಮೇಲೆ ಖಾತೆಗೆ ಹಣ ಜಮಾ ಮಾಡಬೇಕು ಜಮಾ ಮಾಡಿದರೆ ಮಾತ್ರ ದಾಖಲಾತಿಯನ್ನು ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಹಿಂತಿರುಗಿಸುವುದಾಗಿ ಹೇಳಿದ್ದಾರೆ. ಒಟ್ಟು 4,64,175 ರೂ. ಹಣವನ್ನು ಹಾಗೂ 1 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಸುಲಿಗೆ ಮಾಡಿದ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.
ಮತ್ತೆ ಹಣಕ್ಕೆ ಬೇಡಿಕೆಯಿಟ್ಟು 2 ಮೊಬೈಲ್, ದಾಖಲೆಗಳನ್ನು ತಮ್ಮಲ್ಲಿಯೇ ಇರಿಸಿಕೊಂಡ ಆರೋಪಿಗಳು ಸೆ.18ರಂದು ರಾತ್ರಿ 9:30ಕ್ಕೆ ಮುಸ್ತಾಫ್ ಅವರನ್ನು ಬಿಟ್ಟಿದ್ದು ಸ್ನೇಹಿತರ ಸಹಾಯದಿಂದ ಅವರು ಸೆ.19ಕ್ಕೆ ಊರು ಸೇರಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.