ಉಡುಪಿ: ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಗ ರಿಶಾನ್ ಎಂಬಾತನನ್ನು ಎನ್ಐಎ(ರಾಷ್ಟ್ರೀಯ ತನಿಖಾ ದಳ) ಬಂಧಿಸಿದೆ. ಒಂದೊಂದೇ ಆತಂಕಕಾರಿ ವಿಚಾರಗಳು ತನಿಖೆಯಲ್ಲಿ ಹೊರ ಬರುತ್ತಿದೆ. ತನಿಖೆಯನ್ನು ಇನ್ನಷ್ಟು ತೀವ್ರ ಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಾಧ್ಯಯಮಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ , ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಮುಂದುವರೆದ ತನಿಖೆಯಲ್ಲಿ ಮಾಝ್ ಮುನೀರ್, ಶಾರೀಕ್ ರೂಂಮೇಟ್ ಆಗಿದ್ದ ಎನ್. ರೆಶಾನ್ ಶೇಖ್ ಎಂಬಾತನನ್ನು ಎನ್ಐಎ ಬಂಧಿಸಿದೆ. ಬ್ರಹ್ಮಾವರ ತಾಲೂಕಿನ ವಾರಂಬಳ್ಳಿಯ ಮೀನ ಅನ್ಮೋಲ್ ಅಪಾರ್ಟ್ಮೆಂಟ್ನ ರೆಶಾನ್ ಮನೆಯಿಂದ ಎನ್ಐಎ ಅಧಿಕಾರಿಗಳು ಲ್ಯಾಪ್ ಟಾಪ್, ಮೊಬೈಲ್, ಹಾರ್ಡ್ ಡಿಸ್ಕ್ ಸೇರಿ ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಮಂಗಳೂರಿನ ಪಿಎ ಕಾಲೇಜಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಮಾಡುತ್ತಿರುವ ಯುವಕನ ಬ್ಯಾಂಕ್ ಡೀಟೈಲ್ಸ್, ಪಾಸ್ ಪೋರ್ಟ್, ವಿಳಾಸಗಳ ದಾಖಲೆ ಪಡೆದ ಪೊಲೀಸರು ಪೋಷಕರ ಹೇಳಿಕೆಗಳನ್ನು ಪಡೆದು ದಾಖಲು ಮಾಡಿದ್ದಾರೆ. ರೆಶಾನ್ ಶೇಖ್ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಮುಖಂಡ ತಾಜುದ್ದೀನ್ ಶೇಖ್ ಅವರ ಮಗ. ತಾಜುದ್ದೀನ್ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜತೆ ಉತ್ತಮ ಬಾಂಧವ್ಯ ಹೊಂದಿದ್ದು ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ತಾಜುದ್ದೀನ್ ಸಕ್ರಿಯರಾಗಿದ್ದಾರೆ. ಒಂದೊಂದೇ ಆತಂಕಕಾರಿ ವಿಚಾರಗಳು ತನಿಖೆಯಲ್ಲಿ ಹೊರಗೆ ಬರುತ್ತಿದೆ. ಹಾಗಾಗಿ ತನಿಖೆಯನ್ನು ಇನ್ನಷ್ಟು ತೀವ್ರ ಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದರು.
ರಾಜ್ಯ ಕಾಂಗ್ರೆಸ್ ಸ್ಪಷ್ಟನೆ ಕೊಡಬೇಕು:ಕರಾವಳಿಯಲ್ಲಿ ಇಂತಹ ನಿಗೂಢ ಚಟುವಟಿಕೆಗಳ ಬಗ್ಗೆ ತನಿಖೆ ಆಗಬೇಕು. ಹಿಜಾಬ್ ವಿವಾದ ಆದಾಗಲೇ ನಾನು ಆತಂಕ ವ್ಯಕ್ತಪಡಿಸಿದ್ದೆ. ಕರಾವಳಿ ಭಾಗದ ಮೇಲೆ ಎನ್ಐಎ ಹೆಚ್ಚಿನ ನಿಗಾ ಇರಿಸಬೇಕು. ರಿಶಾನ್ ತಂದೆ ತಾಜುದ್ದೀನ್ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ನಲ್ಲಿ ಸಕ್ರಿಯ ಕಾರ್ಯಕರ್ತ. ಸಿದ್ದರಾಮಯ್ಯ, ಡಿಕೆಶಿ, ಯುಟಿ ಖಾದರ್ ಪರಮಾಪ್ತ. ರಾಜ್ಯ ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟನೆ ಕೊಡಬೇಕು. ಕಾಂಗ್ರೆಸ್ ಪಕ್ಷ ಇದರ ಜವಾಬ್ದಾರಿಯನ್ನು ಹೊರಬೇಕು. ಕಾಂಗ್ರೆಸ್ ಪ್ರಮೋಷನ್ ಕೊಟ್ಟು ಬ್ಲಾಕ್ ಅಧ್ಯಕ್ಷನನ್ನಾಗಿ ಮಾಡುತ್ತಾ? ಎಂದು ಅವರು ಪ್ರಶ್ನಿಸಿದರು.