ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೇಜಾವರ ಶ್ರೀಗಳು ಖಂಡನೆ ವ್ಯಕ್ತಪಡಿಸಿದ್ದಾರೆ. ಕರಾವಳಿ ಭಾಗದಲ್ಲಿ ಉಗ್ರ ಕೃತ್ಯಗಳು ಕುಕ್ಕರ್ ಬಾಂಬ್ ಸ್ಫೋಟದ ವೇಳೆ ಗೊತ್ತಾಗಿದೆ. ಕರಾವಳಿ ಭಾಗದ ಜನರು ಸದಾ ಜಾಗೃತರಾಗಿರಬೇಕು. ಸಂದೇಹಾಸ್ಪದ ಚಟುವಟಿಕೆ ಕಂಡ ಕೂಡಲೇ ಜಾಗೃತರಾಗಬೇಕು. ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಬೇಕು ಎಂದು ಹೇಳಿದ್ದಾರೆ.
ಉತ್ಥಾನ ದ್ವಾದಶಿ ಬಳಿಕ ಯಕ್ಷಗಾನ, ಕೋಲ, ಉತ್ಸವ, ಕಂಬಳ, ದೀಪೋತ್ಸವ, ನಾಗಮಂಡಲದಂತಹ ಹಲವಾರು ಉತ್ಸವ ನಡೆಯುತ್ತೆ. ಜನ ಸಂದಣಿ ಹೆಚ್ಚಿರುವ ಸಮಾರಂಭ ನಡೆಯುತ್ತೆ. ಇಂತಹ ಸ್ಥಳಗಳಲ್ಲಿ ಅನಾಹುತ ನಡೆದಲ್ಲಿ ಸಮಾಜಕ್ಕೆ ದೊಡ್ಡ ಹಾನಿ ಆಗುತ್ತದೆ. ಪ್ರತಿಯೊಬ್ಬರೂ ಸದಾ ಜಾಗೃತರಾಗಿಬೇಕು ಎಂದು ತಿಳಿಸಿದರು.
ಉಗ್ರ ಚಟುವಟಿಕೆಯ ಬಗ್ಗೆ ಮಾತನಾಡಿದ ಕಾಣಿಯೂರು ಶ್ರೀಗಳು:ಮಂಗಳೂರು ಸ್ಫೋಟದ ರೂವಾರಿ ಉಡುಪಿಗೆ ಬಂದಿದ್ದ ಎಂಬುದು ಆತಂಕಕಾರಿ ವಿಷಯ. ರಥ ಬೀದಿಗೆ ಬಂದು ಓಡಾಡಿದ್ದ ಎಂಬ ವಿಚಾರ ತಿಳಿದು ಬಹಳ ಆತಂಕವಾಯಿತು. ಈ ವಿಚಾರ ತಿಳಿದು ಬಹಳ ಗೊಂದಲಕ್ಕೀಡಾಗಿದ್ದೇವೆ. ಧಾರ್ಮಿಕ ಕ್ಷೇತ್ರಗಳು ಅಷ್ಟಮಠ ಕೃಷ್ಣ ಮಠ ಎಲ್ಲ ರಥಬೀದಿಯಲ್ಲಿದೆ.
ಹಿಂದೂಗಳು ಸರ್ವೇ ಜನ ಸುಖಿನೋ ಭವಂತು ಅಂತ ಹೇಳುವ ಸಮಾಜ. ಯಾರಿಗೂ ಉಪದ್ರವ ಕೊಡಲು ನಾವು ಇಚ್ಛೆ ಪಡುವುದಿಲ್ಲ. ಹಿಂದೂ ಸಮಾಜವನ್ನು ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿರುವುದು ದುರದೃಷ್ಟಕರ. ಎಲ್ಲ ಸಮಾಜ ಒಟ್ಟಾಗಿ ಭಯೋತ್ಪಾದನಾ ಚಟುವಟಿಕೆ ಹಿಮ್ಮೆಟಿಸಬೇಕು. ಎಂದು ಹೇಳಿದರು.
ಮಾಹಿತಿ ಕೊರತೆ: ಕೃಷ್ಣಮಠದ ಎರಡು ದ್ವಾರಗಳಲ್ಲಿ ಸ್ಕ್ಯಾನಿಂಗ್ ಮಷಿನ್ ಅಳವಡಿಸಲಾಗಿದೆ. ಆಧುನಿಕ ತಂತ್ರಜ್ಞಾನಗಳು ಇದ್ದರೆ ಆ ಬಗ್ಗೆ ನಮಗೆ ಹೆಚ್ಚಿನ ಮಾಹಿತಿಗಳು ಇಲ್ಲ ಭಕ್ತರ ಸೋಗಿನಲ್ಲಿ ಬೇರೆ ಬೇರೆ ವೇಷದಲ್ಲಿ ಬರುವವರಿದ್ದಾರೆ. ಮಂಗಳೂರು ಸ್ಫೋಟದ ರೂವಾರಿ ಕೇಸರಿ ವಸ್ತ್ರವನ್ನು ಹಾಕಿಕೊಂಡಿದ್ದ ಆಧಾರ್ ಕಾರ್ಡ್ನಲ್ಲಿ ಹಿಂದೂ ಹೆಸರಿತ್ತು ಎಂದು ತಿಳಿಯಿತು. ದುಷ್ಕರ್ಮಿಗಳು ಧಾರ್ಮಿಕ ಸ್ಥಳಕ್ಕೆ ಬರುವ ಮೊದಲೇ ಅವರನ್ನು ತಡೆಯುವ ವ್ಯವಸ್ಥೆ ಪೊಲೀಸ್ ಇಲಾಖೆ ಮಾಡಬೇಕು. ದೇಶದ ರಾಜ್ಯದ ಇಂಟೆಲಿಜೆನ್ಸ್ ಪೊಲೀಸರು ದುಷ್ಕೃತ್ಯವನ್ನು ಮೊದಲೇ ತಡೆಹಿಡಿಯಬೇಕು.
ದೇಶಪ್ರೇಮ ಇದ್ದಿದ್ದರೆ ಈ ಕೃತ್ಯ ಮಾಡುತ್ತಿರಲಿಲ್ಲ: ಉಡುಪಿ ರಥ ಬೀದಿಯಲ್ಲಿ ಓಡಾಡಿದ್ದ ಉಗ್ರ ಶಾರಿಕ್ ಬಗ್ಗೆ ಖಂಡನೆ ವ್ಯಕ್ತಪಡಿಸಿದ ಶ್ರೀಗಳು, ಮತಾಂದತೆಯೇ ಈ ದುಷ್ಕೃತ್ಯಕ್ಕೆ ಕಾರಣ. ನಿಜವಾದ ದೇಶಪ್ರೇಮ ಇದ್ದವರು ಇಂಥದ್ದನ್ನೆಲ್ಲ ಮಾಡೋದಿಲ್ಲ. ನಮ್ಮವರು ನಮ್ಮ ದೇಶ ಎಂಬ ಭಾವನೆ ಇದ್ದರೆ ಇಂತಹ ದುಷ್ಕೃತ್ಯ ಮಾಡೋದಿಲ್ಲ. ನಮ್ಮ ಮತವೇ ಶ್ರೇಷ್ಠ ಎಂಬ ಭಾವನೆ ಬಂದಾಗ ಇಂತಹ ಚಟುವಟಿಕೆಗಳು ನಡೆಯುತ್ತದೆ. ಸಾತ್ವಿಕ ಮುಸ್ಲಿಮರು ಇಂತಹ ಕೃತ್ಯಗಳನ್ನು ಖಂಡಿಸಬೇಕು ಮತಾಂಧ ಗುಂಪಿನ ಬಗ್ಗೆ ಎಚ್ಚರಕೆಯಿಂದಿರಬೇಕು ಎಂದರು.
ದುಷ್ಟೃತ್ಯ ಮಾಡುವವರ ಧರ್ಮದಿಂದ ಹೊರಗೆ ಹಾಕಬೇಕು:ಮೌಲ್ವಿ ಮತ್ತು ಜಮಾತ್ ಅವರು ಪರಿಸ್ಥಿತಿ ಸುಧಾರಿಸಿಕೊಂಡು ಹೋಗಬೇಕು. ತಪ್ಪು ಮಾಡಿದವರಿಗೆ ಬುದ್ಧಿ ಹೇಳಬೇಕು, ಶಿಕ್ಷಿಸಬೇಕು. ಒಬ್ಬ ಮಾಡುವ ಕೆಟ್ಟ ಕೆಲಸದಿಂದ ಇಡೀ ಮುಸಲ್ಮಾನ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ.
ಕರಾವಳಿಯ ಜನ ಅನ್ಯಮತೀಯರನ್ನು ಕೇವಲವಾಗಿ ಪರಿಗಣಿಸುವುದಿಲ್ಲ. ಹಿಂದೂ ಧರ್ಮಕ್ಕೆ ಅಪಮಾನ ಆದರೆ ಮೊದಲು ನಾವು ಅದನ್ನು ವಿರೋಧಿಸುತ್ತೇವೆ. ಹಿಂದೂ ಧರ್ಮದ ಬಗೆ ಇರುವ ಶ್ರದ್ದೆಯನ್ನ ಅವರಿಗೆ ಸಹಿಸಲು ಆಗುತ್ತಿಲ್ಲ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಉಗ್ರರ ಮೂಲ ಟಾರ್ಗೆಟ್ ಎಂದು ನಾನು ಭಾವಿಸಿದ್ದೇನೆ ಎಂದು ಉಡುಪಿಯಲ್ಲಿ ಕಾಣಿಯೂರು ಮಠಾಧೀಶ ವಿದ್ಯಾ ವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ:ಉಡುಪಿಯಲ್ಲಿ ಪ್ರಿನ್ಸಿಪಾಲ್ ನಿಂದಿಸಿದ ಆರೋಪ.. ಮನನೊಂದು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ