ಉಡುಪಿ :ಉಡುಪಿಯಿಂದ ಕುಂದಾಪುರಕ್ಕೆ ಹೋಗುವಾಗ ಸಂತೆಕಟ್ಟೆ ಬಳಿ ರೋಬೋಸಾಫ್ಟ್ ಕಂಪನಿ ಕಟ್ಟಡ ನಿಮ್ಮ ಕಣ್ಣಿಗೆ ಬೀಳದೇ ಇರಲು ಸಾಧ್ಯವಿಲ್ಲ. ಯಾಕೆಂದರೆ, ಬಹೃತ್ ಗಾಜಿನ ಈ ಕಟ್ಟಡ ನೋಡುವುದಕ್ಕೆ ವಿಭಿನ್ನವಾಗಿದೆ. 1996ರಲ್ಲಿ ಉಡುಪಿಯ ರೋಹಿತ್ ಭಟ್ ಅವರು ಆರಂಭಿಸಿದ್ದ ರೋಬೋ ಸಾಫ್ಟ್ ಉಡುಪಿ ಜಿಲ್ಲೆಯ ಪಾಲಿನ ಮೊಲದ ಸಾಫ್ಟ್‌ವೇರ್ ಕಂಪನಿ.
1996ರಲ್ಲಿ ಮುಂಬೈನಲ್ಲಿ ಸಂಸ್ಥೆ ಆರಂಭಿಸಿದಾಗ ಕೇವಲ ಒಬ್ಬರೇ ಇದ್ದದ್ದು. ನಂತರ ಬೆಳೆಯುತ್ತಾ 2 ವರ್ಷಗಳ ನಂತ್ರ ಮಂಗಳೂರಿನ ಸುರತ್ಕಲ್‌ಗೆ ಸಂಸ್ಥೆ ಬಂತು. ಬಳಿಕ ಉಡುಪಿಗೆ ಬಂದು 2005ರಲ್ಲಿ ಸಂತೆಕಟ್ಟೆ ಬಳಿ ಹೊಸ ಕಟ್ಟಡ ನಿರ್ಮಿಸಿದ್ದರು.
800 ಕೋಟಿ ರೂ.ಗೆ ಜಪಾನ್‌ನ ಟೆಕ್ನೋ ಪ್ರೋ ಪಾಲಾದ ಕರಾವಳಿ ಹೆಮ್ಮೆಯ ರೋಬೋಸಾಫ್ಟ್ ನಡೆದು ಬಂದ ಹಾದಿಯೇ ರೋಚಕ ಸದ್ಯ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ರೋಬೋಸಾಫ್ಟ್ ಕಂಪನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿ ಜನರೇ ಇರುವುದು ಅನ್ನೋದು ಮತ್ತೊಂದು ವಿಶೇಷ. ಉಡುಪಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ರೋಬೋಸಾಫ್ಟ್, ಬೆಂಗಳೂರು ಹಾಗೂ ಮುಂಬೈನಲ್ಲಿ ಡೆಲಿವರಿ ಕೇಂದ್ರ ಹಾಗೂ ಅಮೆರಿಕ, ಜಪಾನ್ ಸೇರಿದಂತೆ ಹಲವೆಡೆ ಮಾರಾಟ ಕೇಂದ್ರಗಳನ್ನು ಹೊಂದಿದೆ. 2008ರಲ್ಲಿ ಮೊಬೈಲ್ ಆ್ಯಪ್‌ಗಳನ್ನು ಸಿದ್ಧಪಡಿಸುವ ಮೂಲಕ ಜಾಗತಿಕವಾಗಿ ಉದ್ಯಮ ವಿಸ್ತರಿಸಿಕೊಂಡಿತ್ತು.
ತಂತ್ರಾಂಶ ಅಭಿವೃದ್ಧಿ ಆ್ಯಪ್‌ಗಳ ನಿರ್ಮಾಣ ಸೇರಿದಂತೆ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಮಾಧ್ಯಮ ಲೋಕದಲ್ಲಿ ಮೊಬೈಲ್ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ರೋಬೋಸಾಫ್ಟ್‌ಗೆ ಸಲ್ಲುತ್ತದೆ.
ಕೇವಲ ಭಾರತ ಮಾತ್ರವಲ್ಲದೇ ಅಮೆರಿಕ, ಜಪಾನ್ ಸೇರಿದಂತೆ ವಿಶ್ವದ ಹಲವು ಕಡೆಗಳಲ್ಲಿಯೂ ತನ್ನ ವ್ಯವಹಾರವನ್ನು ವಿಸ್ತರಿಸಿದೆ. ರೋಬೋಸಾಫ್ಟ್ ಕಂಪನಿ ಪ್ರಸ್ತುತ ಹಣಕಾಸಿನ ವರ್ಷದಲ್ಲಿ ಭರ್ಜರಿ 184 ಕೋಟಿ ರೂ. ಲಾಭ ಗಳಿಸಿದೆ. ಕಳೆದ ಸಾಲಿನಲ್ಲಿ 97.4 ಕೋಟಿ ರೂ. ಲಾಭ ಗಳಿಸಿತ್ತು. ಆದರೆ, ಈ ಬಾರಿ ತನ್ನ ಲಾಭದ ಪ್ರಮಾಣವನ್ನು ಶೇ.89ರಷ್ಟು ಹೆಚ್ಚಳ ಮಾಡಿಕೊಂಡಿತ್ತು.
ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿರುವ ರೋಬೋಸಾಫ್ಟ್ ಇದೀಗ ಜಪಾನ್ ಕಂಪನಿಯ ಪಾಲಾಗಿದೆ. ಜಪಾನ್ ಮೂಲದ ಟೆಕ್ನೋಪ್ರೋ ಹೋಲ್ಡಿಂಗ್ ಕಂಪನಿ ಡಿಜಿಟಲ್ ಟ್ರಾನ್ಸ್‌ಫಾರ್ಮೇಶನ್ ಸೆಲ್ಯೂಷನ್ಸ್ ಸಂಸ್ಥೆಯಾಗಿರುವ ರೋಬೋಸಾಫ್ಟ್‌ನ ಶೇ.100ರಷ್ಟು ಷೇರು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಖುದ್ದು ರೋಬೋಸಾಫ್ಟ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಭಟ್ ಸ್ಪಷ್ಟ ಪಡಿಸಿದ್ದಾರೆ.
ಈಗಾಗಲೇ ಮಾರಾಟ ಒಪ್ಪಂದ ಮುಗಿದಿದೆ. ಸುಮಾರು ಶೇ.80ರಷ್ಟು ಷೇರುಗಳನ್ನು ಜಪಾನ್‌ನ ಟೆಕ್ನೋ ಪ್ರೋ ಖರೀದಿಸಿದೆ. ಕಂಪನಿ ಮಾರಾಟವಾದ್ರೂ ರೋಬೋಸಾಫ್ಟ್ ಹೆಸರಿನಲ್ಲೇ ಕಾರ್ಯಾಚರಿಸಲಿದೆ. ಲೆಗಸಿ ಇದೇ ರೀತಿ ಮುಂದುವರೆಯಲಿದೆ. ಟೆಕ್ನೋ ಪ್ರೊನಲ್ಲಿ 21 ಸಾವಿರ ಉದ್ಯೋಗಿಗಳಿದ್ದಾರೆ.
ಈ ಸಂಸ್ಥೆಯನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಅವರದು. ಇನ್ನೊಂದು ವರ್ಷದಲ್ಲಿ ಉಳಿದ ಶೇ.20ರಷ್ಟು ಷೇರುಗಳ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಸದ್ಯ ಚಾಲ್ತಿಯಲ್ಲಿರುವ ಆಡಳಿತ ಮಂಡಳಿಯೇ ಕಂಪನಿಯನ್ನು ಮುನ್ನಡೆಸಿಕೊಂಡು ಹೋಗಲಿದೆ.