ಉಡುಪಿ :ಶಾಸಕಜಮೀರ್ ಅಹ್ಮದ್ ವಿಚಾರಣೆ ಆಗಲಿ. ತಪ್ಪು ಮಾಡಿದ್ರೆ ಶಿಕ್ಷೆಯೂ ಆಗಲಿ. ಜಮೀರ್ ಅಹ್ಮದ್ ಬಗ್ಗೆ ಮೀಡಿಯಾ ಟ್ರಯಲ್ ನಡೆಸುವುದು ಸರಿಯಲ್ಲ. ಶಿಕ್ಷೆ ಆಗುವ ಮೊದಲು ಪೊಲಿಟಿಕಲ್ ಟ್ರಯಲ್ ಯಾಕೆ?, ಜಮೀರ್ ಬಗ್ಗೆ ಸರ್ಕಾರ, ಮಂತ್ರಿಗಳು ಈಗ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕಿಡಿ ಕಾರಿದ್ದಾರೆ.
ಬಿಜೆಪಿ ನಾಯಕರು ತನಿಖಾಧಿಕಾರಿಗಳ ಹಾಗೆ ವರ್ತಿಸ್ತಾರೆ. ಬಿಜೆಪಿ ಎಂಎಲ್ಸಿ ರವಿಕುಮಾರ್ ಮೂರು ದಿನಗಳಲ್ಲಿ ಜಮೀರ್ ಬಂಧನ ಆಗುತ್ತೆ ಅಂತಾ ಹೇಳಿದ್ದಾರೆ. ಈ ಹೇಳಿಕೆ ಕೊಡುವ ಅಧಿಕಾರ ರವಿಕುಮಾರ್ಗೆ ಯಾರು ಕೊಟ್ಟರು. ಎಂಎಲ್ಸಿ ರವಿಕುಮಾರ್ ತನಿಖಾಧಿಕಾರಿಯೇ? ಗೃಹಸಚಿವರೇ? ರಾಜ್ಯ ಸರ್ಕಾರ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ. ತನಿಖೆ ಮಾಡಿ ತಕ್ಷಣ ಕ್ರಮಕೈಗೊಳ್ಳಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಡ್ರಗ್ಸ್- ಡಿ.ಜೆ. ಹಳ್ಳಿ ಪ್ರಕರಣಗಳೇ ವೈಫಲ್ಯಕ್ಕೆ ಸಾಕ್ಷಿ. ಡ್ರಗ್ಸ್ ವಿಚಾರ ಮುನ್ನೆಲೆಗೆ ತಂದು ಇತರ ವೈಫಲ್ಯ ಮರೆಮಾಚ್ತಿದ್ದಾರೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸಚಿವ ಸಿ ಟಿ ರವಿ ಒತ್ತಡ ಇದೆ ಅಂತಾರೆ. ಯಾರಿಂದ ಒತ್ತಡ ಇದೆ ಅನ್ನೋದನ್ನು ಹೇಳಿ. ನೀವೇನು ನಿಮ್ಮ ಹೋಮ್ ಮಿನಿಸ್ಟರ್ ಇರೋವಾಗ ರಾಜಕೀಯ ಪ್ರೇರಿತ ಸ್ಟೇಟ್‌ಮೆಂಟ್ ಮಾಡಬೇಡಿ. ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ಯಾರಿಗೂ ರಕ್ಷಣೆ ಕೊಡಲ್ಲ. ತನಿಖೆಗೆ ಕಾಂಗ್ರೆಸ್ ಸಹಕಾರ ಕೊಡುತ್ತೆ, ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ. ನಟಿ ರಾಗಿಣಿ ನಿಮ್ಮದೇ ಪಕ್ಷದ ಪ್ರಚಾರಕಿ, ಬಿಜೆಪಿ ವರ್ಕರ್, ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಆಗಲಿ ಎಂದು ಸಲೀಂ ಅಹ್ಮದ್ ಹೇಳಿದ್ದಾರೆ.
ಪ್ರವಾಹ ವಿಚಾರ ಖರ್ಚು ವೆಚ್ಚಗಳ ಬಗ್ಗೆ ಅಧಿವೇಶನದಲ್ಲಿ ಶ್ವೇತಪತ್ರ ಕೇಳ್ತೇವೆ. ಅಧಿವೇಶನದ ದಿನ ವಿಸ್ತರಿಸುವ ಬಗ್ಗೆ ಒತ್ತಾಯಿಸಿದ್ದೇವೆ. ಕಳೆದ ವರ್ಷದ ಪ್ರವಾಹದ ಹಣ ಇನ್ನೂ ಬಿಡುಗಡೆಯಾಗಿಲ್ಲ. ಈ ಬಾರಿಯೂ 10 ಸಾವಿರ ಕೋಟಿ ನಷ್ಟವಾಗಿದೆ. ಯಾವ ಪುರುಷಾರ್ಥಕ್ಕೆ ಬಿಜೆಪಿಯ 25 ಎಂಪಿಗಳು ಆಯ್ಕೆಯಾಗಿದ್ದಾರೋ.. ಇಲ್ಲಿ ಹುಲಿಯಾಗಿದ್ದೀರ. ಆದರೆ, ದೆಹಲಿಯಲ್ಲಿ ಬೆಕ್ಕಿನಂತೆ ವರ್ತಿಸ್ತೀರಾ?. ಪ್ರಧಾನಿ ಮುಂದೆ ನಿಂತು ಮಾತನಾಡುವ ಧೈರ್ಯ ಇಲ್ಲ ಅಂತಾ ಬಿಜೆಪಿ ಸಂಸದರಿಗೆ ಲೇವಡಿ ಮಾಡಿದ್ದಾರೆ.