ಉಡುಪಿ: ಪ್ರಧಾನಿ ಮೋದಿ ಜೊತೆ ಸಂವಾದ ನಡೆಸುವುದು ಹೆಮ್ಮೆಯ ವಿಷಯವಾಗಿತ್ತು. ಆದರೆ, ಕಾರಣಾಂತರದಿಂದ ಬುಧವಾರದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆ ಪ್ರಸಾರವಾಗಿಲ್ಲ. ಇದರಿಂದ ನನಗೆ ಯಾವುದೇ ಬೇಸರವಾಗಿಲ್ಲ ಎಂದು ವಿದ್ಯಾರ್ಥಿನಿ ಅನುಷಾ ಹೇಳಿದ್ದಾಳೆ.
ಪ್ರಧಾನಿಯೊಂದಿಗೆ ಮಾತನಾಡಿಲ್ಲ ಎಂದು ಬೇಸರವಿಲ್ಲ, ಮತ್ತೆ ಪ್ರಯತ್ನಿಸುವೆ: ವಿದ್ಯಾರ್ಥಿನಿ ಅನುಷಾ
ಪ್ರಧಾನಿ ಮೋದಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಯ್ಕೆಯಾಗಿದ್ದ ಉಡುಪಿಯ ವಿದ್ಯಾರ್ಥಿನಿ ಅನುಷಾ ಮೋದಿಯೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಕಿ ನನಗೆ ಯಾವುದೇ ಬೇಸರವಿಲ್ಲ. ಮತ್ತೆ ಅರ್ಜಿ ಸಲ್ಲಿಸುತ್ತೇನೆ ಎಂದಿದ್ದಾಳೆ.
ಕುಂದಾಪುರ ತಾಲೂಕಿನ ಅನುಷಾ, ಆರ್ ಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ವಾರದ ಹಿಂದೆ ದೆಹಲಿಯಿಂದ ಬಂದ ಪ್ರಧಾನಿ ಕಚೇರಿಯ ತಾಂತ್ರಿಕ ವರ್ಗ ಅನುಷಾಳ ಪ್ರಶ್ನೆಯನ್ನು ದಾಖಲಿಸಿಕೊಂಡು ಹೋಗಿತ್ತು. ಆದರೆ, ಸಮಯಾವಕಾಶದ ಕೊರತೆಯಿಂದ ಅನುಷಾ ಭಾಗಿಯಾಗಲು ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿನಿ ನನ್ನ ಶಾಲೆಯ ಹೆಸರು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಕ್ಕೆ ಹೆಮ್ಮೆಯಾಗುತ್ತಿದೆ.
ಮುಂದಿನ ಬಾರಿ ನಡೆಯುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಮತ್ತೆ ಅರ್ಜಿ ಸಲ್ಲಿಸುತ್ತೇನೆ. ನನ್ನನ್ನು ಬೆಂಬಲಿಸಿದ ಎಲ್ಲ ಅಧ್ಯಾಪಕರು ಹಾಗೂ ಶಿಕ್ಷಣ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾಳೆ. ಕೂಲಿಕಾರ್ಮಿಕ ಕೃಷ್ಣ ಕುಲಾಲ್ ಮತ್ತು ಜಯಲಕ್ಷ್ಮಿ ದಂಪತಿ ಪುತ್ರಿ ಅನುಷಾಗೆ ಪ್ರಧಾನಿ ಜೊತೆ ಮಾತನಾಡಲು ಅವಕಾಶ ಸಿಗದೇ ಇರುವುದಕ್ಕೆ ಗ್ರಾಮದ ಜನ ಬೇಸರಗೊಂಡಿದ್ದಾರೆ.