ಶಿರಸಿ- ಉಡುಪಿ: ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ಮಂಗಳವಾರವೂ ಮುಂದುವರೆದಿದ್ದು, ಮಲೆನಾಡಿನ ತಾಲೂಕುಗಳಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ.
ಶಿರಸಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದ್ದು, ಮುಖ್ಯ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಸಿದ್ದಾಪುರ- ಶಿರಸಿ, ಯಲ್ಲಾಪುರ-ಶಿರಸಿ, ಕುಮಟಾ-ಶಿರಸಿ ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ.
ಇನ್ನೂ ಸಿದ್ದಾಪುರದ ಹಾಳದಕಟ್ಟದಲ್ಲಿ ಮನೆಗೆ ನೀರು ನುಗ್ಗಿದ್ದು, ಮನೆಯವರು ನೀರನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ತಾಲೂಕು ಆಡಳಿತ ಗಂಜಿ ಕೇಂದ್ರಕ್ಕೆ ವ್ಯವಸ್ಥೆ ಮಾಡಿದ್ದು, ಮಳೆ ಹೆಚ್ಚಾಗುವ ನಿರೀಕ್ಷೆ ಇರುವ ಕಾರಣ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಇನ್ನು ಉಡುಪಿ ಜಿಲ್ಲಾದ್ಯಂತ ಸೋಮವಾರ ರಾತ್ರಿಯಿಂದಲೇ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಕತ್ತಲಲ್ಲಿ ದಿನ ಕಳೆಯುವಂತಾಗಿದೆ. ಕಳೆದ 24 ಗಂಟೆಯಲ್ಲಿ 151 ಮಿ.ಮೀ ಮಳೆ ದಾಖಲಾಗಿದೆ. ಕಾರ್ಕಳ 135, ಉಡುಪಿ ತಾಲೂಕಿನಲ್ಲಿ 116 ಮಿಮೀ. ಮಳೆ ಕುಂದಾಪುರದಲ್ಲಿ ಅತೀ ಹೆಚ್ಚು 182 ಮಿಮೀ ಮಳೆ ದಾಖಲಾಗಿದೆ.
ಉಡುಪಿಯಲ್ಲಿ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಉಡುಪಿ ಅಜ್ಜರಕಾಡು ಸಮೀಪ ಆರು ವಿದ್ಯುತ್ ಕಂಬ ಉರುಳಿ ಮೂರು ಗೂಡಂಗಡಿಗಳಿಗೆ ಹಾನಿಯಾಗಿದೆ.
ಮುಂಜಾಗ್ರತಾ ಕ್ರಮವಾಗಿ ಉಡುಪಿಯ ಎಂಜಿಎಂ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಮಧ್ಯದಲ್ಲಿಯೇ ಮನೆಗೆ ಕಳಿಸಿದ ಘಟನೆ ನಡೆದಿದೆ. ಜಿಲ್ಲಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು, ಇನ್ನೆರಡು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ.