ಉಡುಪಿ: ಸದನದಲ್ಲಿ ಮೀನುಗಾರರ ಸಮಸ್ಯೆ ಬಗ್ಗೆ ಧ್ವನಿ ಎತ್ತುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಉಡುಪಿಯ ಮಲ್ಪೆ ಬಂದರಿನಲ್ಲಿ ಮಾತನಾಡಿದ ಅವರು, ಮೀನುಗಾರರ ಸಮಸ್ಯೆ ಹೇಳಲು ಮುಖ್ಯಮಂತ್ರಿಗಳ ಭೇಟಿಯಾದರೆ ಲೆಕ್ಕಕ್ಕೆ ಬರುವುದಿಲ್ಲ. ವಿಧಾನಸಭೆಯಲ್ಲಿ ಮೀನುಗಾರರ ಸಮಸ್ಯೆ ಬಗ್ಗೆ ಚರ್ಚಿಸುತ್ತೇನೆ. ಮೀನುಗಾರರ ಧ್ವನಿಯಾಗಿ ಸದನದಲ್ಲಿ ಬೆಲೆ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸರ್ಕಾರ ಮೀನುಗಾರರ ಸಮಸ್ಯೆ ನಿವಾರಿಸುತ್ತದೆ ಎಂಬ ನಂಬಿಕೆ ಇಲ್ಲ. ಮುಂದಿನ ಅವಧಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಮೀನುಗಾರಿಕೆ ವಿಚಾರದಲ್ಲಿ ರಾಷ್ಟ್ರದಲ್ಲಿ ಏಕರೂಪಿ ಕಾನೂನು ಬರಬೇಕು. ಎಲ್ಲ ರಾಜ್ಯಗಳ ಜೊತೆ ಸಮಾಲೋಚನೆ ನಡೆಸಬೇಕಾಗುತ್ತದೆ. ಮೀನುಗಾರರ ಪೆನ್ಶನ್, ಡೀಸೆಲ್ ಸಬ್ಸಿಡಿ, ಆಶ್ರಯ ಮನೆ, ಸಿಆರ್ಝಡ್ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ತಿಳಿಸಿದರು.
ಹೊಸ ರಾಜ್ಯಪಾಲರಿಗೆ ಅಭಿನಂದನೆ:
ಹೊಸ ರಾಜ್ಯಪಾಲರಿಗೆ ಅಭಿನಂದನೆ ಸಲ್ಲಿಸುತ್ತೇನೆ, ನಿರ್ಗಮಿತ ರಾಜ್ಯಪಾಲರು ತಮ್ಮ ಕೈಲಾದ ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ನಮಗೆ ಸಾಕಷ್ಟು ಭಿನ್ನಾಭಿಪ್ರಾಯ ಇರಬಹುದು. ಭೇಟಿ ಮಾಡಲು ಬಯಸಿದಾಗಲೆಲ್ಲ ನಮ್ಮನ್ನು ಅವರು ಕರೆದಿದ್ದಾರೆ. ಕಾಂಗ್ರೆಸ್ ಪಕ್ಷದ ಜೊತೆ ಚರ್ಚೆ ಮಾಡಿದ್ದಾರೆ. ಉಳಿದಂತೆ ಪೊಲಿಟಿಕಲ್ ಬಾಸ್ಗಳು ಹೇಳಿದಂತೆ ಮಾಡಿದ್ದಾರೆ ಎಂದರು.
ಕುಮಾರ ಸ್ವಾಮಿ-ಸುಮಲತಾ ನಡುವಿನ ಸಂಘರ್ಷ:
ಉಡುಪಿಯಲ್ಲಿ ಮಾತನಾಡುತ್ತಾ ಕುಮಾರ ಸ್ವಾಮಿ-ಸುಮಲತಾ ನಡುವಿನ ಸಂಘರ್ಷ ಕುರಿತು ಪ್ರತಿಕ್ರಿಯೆ ನೀಡಿ, ನನಗೆ ಕುಮಾರಸ್ವಾಮಿ ಸುದ್ದಿನೂ ಬೇಡ, ಸುಮಲತಾ ಸುದ್ದಿನೂ ಬೇಡ. ನಮ್ಮ ಗಮನ ಇರುವುದು ಮೇಕೆದಾಟು ವಿಚಾರದಲ್ಲಿ. ಇದರಲ್ಲಿ ಮುಖ್ಯಮಂತ್ರಿಗಳು ತಮಿಳುನಾಡು ಸಿಎಂ ಸ್ಟಾಲಿನ್ಗೆ ಪತ್ರ ಬರೆದಿರುವುದು ಸರಿಯಲ್ಲ. ಮೊದಲು ಟೆಂಡರ್ ಕರೆದು ಮೇಕೆದಾಟು ಡ್ಯಾಮ್ ಕಟ್ಟುವ ಕೆಲಸ ಮಾಡಿ. ಡ್ಯಾಮ್ ವಿಚಾರದಲ್ಲಿ ಏರುಪೇರು ಇದ್ದರೆ, ಅದಕ್ಕೊಂದು ತಂಡ ಇದೆ. ತಂಡದ ಮೂಲಕ ಸಮಸ್ಯೆಯನ್ನು ಬಗೆಹರಿಸಿ ಎಂದು ಡಿಕೆಶಿ ಆಗ್ರಹಿಸಿದರು.
ಚಿದಾನಂದ ಸವದಿ ಕಾರು ಅಪಘಾತ:
ಡಿಸಿಎಂ ಸವದಿ ಪುತ್ರ ಚಿದಾನಂದ ಸವದಿ ಕಾರು ಅಪಘಾತ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಹಿಂದೆ ಶಾಸಕ ಸಿ ಟಿ ರವಿ ವಿಚಾರದಲ್ಲೂ ಹೀಗೆ ಆಗಿತ್ತು. ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.
ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ:
ಮಲ್ಪೆ ಮೀನುಗಾರಿಕಾ ಬಂದರು ಭೇಟಿ ನೀಡಿದರು. ಮೀನುಗಾರರ ಸಂಕಷ್ಟ ಆಲಿಸಲು ಬಂದಿದ್ದ ಅವರು, ಎರಡು ಗಂಟೆಗೂ ಅಧಿಕ ಕಾಲ ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು. ಸರ್ವಋತು ಮೀನುಗಾರಿಕಾ ಬಂದರಿನಲ್ಲಿ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರ ಮುಖಂಡರು ಭಾಗವಹಿಸಿದ್ದರು. ಡೀಸೆಲ್ ಸಬ್ಸಿಡಿ, ಮತ್ಸ್ಯಾಶ್ರಯ ಮನೆ, ಸಿಆರ್ಝಡ್ ಸಮಸ್ಯೆ ಸೇರಿದಂತೆ, ಹಲವಾರು ವಿಷಯಗಳ ಬಗ್ಗೆ ಮುಖಂಡರು ಗಮನ ಸೆಳೆದರು. ಮೀನುಗಾರರ ಅಹವಾಲು ಸ್ವೀಕರಿಸಿದ ಬಳಿಕ ಕೆಲಕಾಲ ಬೋಟ್ನಲ್ಲಿ ಕುಳಿತು ಬಂದರು ವೀಕ್ಷಣೆ ಮಾಡಿದರು.