ಉಡುಪಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕೂ ಉಡುಪಿಗೂ ನಿರಂತರ ನಂಟು ಯಾವತ್ತೂ ಇತ್ತು. ಹೋರಾಟಕ್ಕೆ ಪ್ರೇರಣೆ ನೀಡಿದ ಪೇಜಾವರ ಶ್ರೀಗಳಿಂದ ಹಿಡಿದು ರಾಮಮಂದಿರಕ್ಕಾಗಿ ಕರಸೇವೆ ನಡೆಸಿದ ಕಾರ್ಯಕರ್ತರವರೆಗೂ ಅಯೋಧ್ಯೆಯ ಜೊತೆ ಉಡುಪಿ ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ಇದೀಗ ರಾಮಲಲ್ಲಾನನ್ನು ಹೊತ್ತೊಯ್ಯುವ ರಥ ಉಡುಪಿಯಲ್ಲಿ ನಿರ್ಮಾಣವಾಗುತ್ತಾ ಎಂಬ ನಿರೀಕ್ಷೆ ಹೆಚ್ಚಾಗತೊಡಗಿದೆ.
ಕೋಟೇಶ್ವರದಲ್ಲಿರುವ ಹಿರಿಯ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಕೃಷ್ಣನೂರು ಉಡುಪಿಗೂ ರಾಮಜನ್ಮಭೂಮಿ ಅಯೋಧ್ಯೆಗೂ ಅವಿನಾಭಾವ ಸಂಬಂಧವಿದೆ. ರಾಮಮಂದಿರ ನಿರ್ಮಾಣ ಟ್ರಸ್ಟ್ನಲ್ಲಿ ಉಡುಪಿಯ ಪೇಜಾವರ ಶ್ರೀಗಳು ವಿಶ್ವಸ್ಥರಾಗಿದ್ದರು. ರಾಮಮಂದಿರದ ಜೊತೆ ಕೈ ಜೋಡಿಸುವ ಮತ್ತೊಂದು ಅವಕಾಶ ಉಡುಪಿಗೆ ಸಿಗುವ ಎಲ್ಲಾ ಸಾಧ್ಯತೆಯಿದೆ. ಮಂದಿರ ನಿರ್ಮಾಣದ ನಂತರ ರಾಮಲಲ್ಲಾನ ಉತ್ಸವ ನಡೆಸಲು ಬೇಕಾದ ರಥ ಉಡುಪಿಯಲ್ಲಿ ನಿರ್ಮಾಣವಾಗುವ ಸಾಧ್ಯತೆಗಳಿವೆ.
ಓದಿ: ಮತ್ತೆ ಸಿಎಂ ವಿರುದ್ಧ ಅಸಮಾಧಾನ ಹೊರ ಹಾಕಿದ ಬಸನಗೌಡ ಪಾಟೀಲ್ ಯತ್ನಾಳ್
ಜಿಲ್ಲೆಯ ಕುಂದಾಪುರ ಸಮೀಪದ ಕೋಟೇಶ್ವರದಲ್ಲಿರುವ ಹಿರಿಯ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ರಥ ನಿರ್ಮಾಣದ ಜವಾಬ್ದಾರಿ ವಹಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಕರಾವಳಿ ಭಾಗದ ಕುಕ್ಕೆ ಸುಬ್ರಮಣ್ಯ ದೇವಸ್ಥಾನ, ಧರ್ಮಸ್ಥಳದ ಬ್ರಹ್ಮರಥ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳಿಗೆ ಇವರೆ ರಥವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಈ ರಥಗಳನ್ನು ಕಂಡು ಬೆರಗಾಗಿರುವ ಸ್ವಾಮೀಜಿಯೊಬ್ಬರು ಲಕ್ಷ್ಮೀ ನಾರಾಯಣ ಆಚಾರ್ಯರನ್ನು ಸಂಪರ್ಕ ಮಾಡಿದ್ದು, ಮಾತುಕತೆ ಫಲಪ್ರದವಾದರೆ ರಾಮಲಲ್ಲಾನ ರಥ ಉಡುಪಿಯಲ್ಲೇ ಸಿದ್ಧವಾಗಲಿದೆ.
ಅಯೋಧ್ಯೆಯ ವಾತಾವರಣಕ್ಕೆ ಹೊಂದಿಕೊಳ್ಳಬಹುದಾದ ರಥವನ್ನು ನಿರ್ಮಿಸಿ ಕೊಡಲು ಸಾಧ್ಯವೆ ಎಂದು ವಿಚಾರಿಸಲಾಗಿದೆ. ರಥ ನಿರ್ಮಾಣಕ್ಕೆ ಬೇಕಾದ ಅವಧಿ ಮತ್ತು ರಥ ನಿರ್ಮಾಣ ಮಾಡುವ ಸ್ಥಳ, ರಥದ ಶೈಲಿ, ಮರದ ಬಳಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಎಲ್ಲಾ ಓಕೆ ಆದರೆ ಉಡುಪಿಯ ಆಚಾರ್ಯರೇ ರಥ ನಿರ್ಮಿಸುತ್ತಾರೆ. ಈ ಮೂಲಕ ಮತ್ತೊಮ್ಮೆ ಉಡುಪಿ ಅಯೋಧ್ಯೆಗೆ ಹತ್ತಿರವಾಗಲಿದೆ. ಈ ಎಲ್ಲಾ ಬೆಳವಣಿಗೆಗೆ ಪೂರಕವೋ ಎಂಬಂತೆ ಬಿಜೆಪಿಯ ಜೊತೆ ಗುರುತಿಸಿಕೊಂಡಿರುವ ಖ್ಯಾತ ಚಿಂತಕಿ, ಅಂಕಣಗಾರ್ತಿ ಶೆಫಾಲಿ ವೈದ್ಯ ಒಂದು ಟ್ವೀಟ್ ಮಾಡಿದ್ದು, ಅದರಲ್ಲಿ ಅಯೋಧ್ಯೆಯ ರಥ ನಿರ್ಮಿಸುವ ಶಿಲ್ಪಿ ಇವರೇ ಎಂದು ಲಕ್ಷ್ಮೀನಾರಾಯಣ ಆಚಾರ್ಯರನ್ನು ಸಾಮಾಜಿಕ ಜಾಲತಾಣಗಳಿಗೆ ಪರಿಚಯಿಸಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗಿದೆ.