ತುಮಕೂರು: ಕಿರುಕುಳ ನೀಡುತ್ತಿದ್ದ ಪತಿಯ ಹಿಂಸೆ ತಾಳಲಾರದೇ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಾಲೂಕಿನ ಅನುಪನಹಳ್ಳಿಯಲ್ಲಿ ನಡೆದಿದೆ. ಗೌರಮ್ಮ 22 ಆತ್ಮಹತ್ಯೆ ಶರಣಾಗಿರುವ ಗೃಹಿಣಿ.
ಸರ್ಕಾರದ ಸವಲತ್ತು ಸಿಗಲಿದೆ ಎಂಬ ಉದ್ದೇಶದಿಂದ ಪರಿಶಿಷ್ಟ ಜಾತಿಯ ಗೌರಮ್ಮಳನ್ನು ರವಿತೇಜ ಎಂಬಾತ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಮದುವೆಯಾದ ನಂತರ ಪತಿ ರವಿತೇಜ ಪತ್ನಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗ್ತಿದೆ. ಇದರಿಂದ ಬೇಸತ್ತ ಗೌರಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ವಿನಾಕಾರಣ ಪ್ರತಿನಿತ್ಯ ಇಬ್ಬರ ನಡುವೆ ಒಂದಿಲ್ಲೊಂದು ಕಾರಣದಿಂದ ಜಗಳ ನಡೆಯುತ್ತಿತ್ತು. ಇದರಿಂದ ರೋಸಿಹೋದ ಗೌರಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಚಗೊಂಡನಹಳ್ಳಿ ನಿವಾಸಿಯಾಗಿದ್ದ ಗೌರಮ್ಮ, ತಂದೆ-ತಾಯಿಯಿಲ್ಲದ ಅನಾಥೆಯಾಗಿದ್ದರು. ಹೀಗಾಗಿ ಗೌರಮ್ಮಳನ್ನು ಅವರ ಚಿಕ್ಕಮ್ಮ ಸಾಕಿ ಬೆಳೆಸಿದ್ದರು. ಗೌರಮ್ಮ ಯಲ್ಲಾಪುರದಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈಕೆ ಪರಿಶಿಷ್ಟ ಜಾತಿಗೆ ಸೇರಿದ್ದರಿಂದ ರವಿತೇಜ ಮದುವೆಯಾಗಿದ್ದನು ಎನ್ನಲಾಗ್ತಿದೆ.
ಅಲ್ಲದೆ, ಸರ್ಕಾರದಿಂದ ಬರುವಂತಹ ಮೂರು ಲಕ್ಷ ರೂಪಾಯಿ ಹಣ ಸಹ ಪಡೆದುಕೊಂಡಿದ್ದನಂತೆ. ಆದರೂ ಸಹ ಹಣಕ್ಕಾಗಿ ಪದೇಪದೇ ಪತ್ನಿಯನ್ನು ಪತಿ ಪೀಡಿಸುತ್ತಿದ್ದರು. ಇದರಿಂದ ಬೇಸತ್ತು ಗೌರಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಸ್ಮಶಾನಕ್ಕೆ ತೆರಳಲು ಮಳೆ ಅಡ್ಡಿ.. ಗ್ರಾ ಪಂ ಕಚೇರಿ ಮುಂದೆ ಶವ ಹೂತ ಗ್ರಾಮಸ್ಥರು!