ತುಮಕೂರು:ಹಲವು ದಶಕಗಳಿಂದ ಪರಿಶಿಷ್ಟ ಪಂಗಡಕ್ಕೆ (ಶೇ. 7.5) ಮೀಸಲಾತಿ ಕಲ್ಪಿಸಿಕೊಡದೇ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಲಾ ರಾಜಣ್ಣ ಆರೋಪಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಿಂದ ಮೀಸಲಾತಿಗಾಗಿ ಹೋರಾಟವನ್ನು ನಡೆಸಿಕೊಂಡು ಬರಲಾಗುತ್ತಿದೆ. ಕೇಂದ್ರ ಸರ್ಕಾರದಲ್ಲಿ 7.5 ಮೀಸಲಾತಿ ನೀಡಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಕೇವಲ ಶೇ. 3 ಮೀಸಲಾತಿ ನೀಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರದಿಂದ ನಾವು ವಂಚನೆಗೆ ಒಳಗಾಗಿದ್ದೇವೆ ಎಂದರು.
ಜನಸಂಖ್ಯೆ ಆಧಾರದ ಮೇಲೆ 7.5 ಮೀಸಲಾತಿಯನ್ನು ರಾಜ್ಯ ಸರ್ಕಾರ ನೀಡಬೇಕು. ಆದರೆ, ಅಧಿಕಾರಕ್ಕೆ ಬಂದ ಪಕ್ಷಗಳು ಪರಿಶಿಷ್ಟ ಪಂಗಡಕ್ಕೆ ಸೌಲಭ್ಯ ನೀಡುವಲ್ಲಿ ಹಿಂದೇಟು ಹಾಕುತ್ತಿವೆ. ರಾಜ್ಯ ಸರ್ಕಾರ ನಾಗಮೋಹನದಾಸ್ ಆಯೋಗವನ್ನು ರಚಿಸಿತ್ತು. ಆಯೋಗ ಈಗಾಗಲೇ ಶೇ. 7.5 ಮೀಸಲಾತಿಯನ್ನು ಕಲ್ಪಿಸಬಹುದು ಎಂದು ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಹೀಗಿದ್ದರೂ ಸರ್ಕಾರ ಇದನ್ನು ಜಾರಿಗೆ ತರುತ್ತಿಲ್ಲ ಎಂದು ಆರೋಪಿಸಿದರು. ಹೀಗಾಗಿ ಈ ಬಾರಿ ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತು ಸರ್ಕಾರ ಪ್ರಸ್ತಾಪಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಲಾ ರಾಜಣ್ಣ ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರಿಗೆ ಬೆಂಬಲ ನೀಡುತ್ತೇವೆ. ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಮತ್ತು ಮಾಜಿ ಸಚಿವ ಟಿಬಿ ಜಯಚಂದ್ರ ನಡುವೆ ಮನಸ್ತಾಪ ಇರಬಹುದು. ಆದರೆ, ಮನಸ್ತಾಪ ಹಾಗೂ ಪಕ್ಷದ ಆದೇಶ ಎರಡೂ ಬೇರೆ. ಕಾಂಗ್ರೆಸ್ ಪಕ್ಷವು ವ್ಯಕ್ತಿಗತ ಪಕ್ಷವಲ್ಲ. ಹಾಗಾಗಿ, ರಾಜಣ್ಣ ಅವರು ಸಹ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.