ತುಮಕೂರು:ಇತ್ತೀಚೆಗೆ ಸುರಿದ ಭಾರೀ ಮಳೆಗೆ ತುಂಬಿದ ಕೆರೆಗೆ ಬಾಗಿನ ಅರ್ಪಿಸುವ ಬದಲು ಕೋಣನ ಬಲಿ ನೀಡಿ ಮತ್ತು ಕೋಣನ ತಲೆಯನ್ನು ವ್ಯಕ್ತಿಯೊಬ್ಬರ ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿರುವ ವಿಚಿತ್ರ ಘಟನೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಮದಲೂರಿನಲ್ಲಿ ನಡೆದಿದೆ.
ಕೆರೆಗೆ ಮತ್ತು ಜನತೆಗೆ ಯಾವುದೇ ಕೇಡು ಉಂಟಾಗಬಾರದು ಎಂಬ ಕಾರಣದಿಂದ ಕೆರೆಕೋಡಿಯಲ್ಲಿದ್ದ ದುರ್ಗಮ್ಮನಿಗೆ ಆರು ವರ್ಷದ ಕೋಣನ ಬಲಿ ನೀಡಲಾಗಿದೆ. ಕತ್ತರಿಸಿದ ಕೋಣನ ತಲೆಯನ್ನು ವ್ಯಕ್ತಿಯೊಬ್ಬರ ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ ಕೋಡಿಯಲ್ಲಿ ತೇಲಿ ಬಿಡಲಾಗಿದೆ. ಕೋಣ ಮಾಂಸವನ್ನು ಸಮುದಾಯದವರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಕೋಣನ ಬಲಿಯನ್ನು ಗೌರಿ ಹಬ್ಬದಂದು ದುರ್ಗಮ್ಮನಿಗೆ ಬಲಿ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮದಲೂರು ಕೆರೆ ಬಳಿ ಇರುವ ದುರ್ಗಮ್ಮನಿಗೆ ಕೋಡಿ ಬಿದ್ದಿರುವ ಸಂದರ್ಭದಲ್ಲಿ ಕೋಣನ ಬಲಿ ನೀಡಲಾಗುತ್ತದೆ. ಹಿಂದೆಯೂ ಕೆಲವು ಬಾರಿ ಕೋಣನ ಬಲಿ ನೀಡಲಾಗಿದೆ. ಯಾರಿಗೂ ಗೊತ್ತಾಗದಂತೆ ಬೆಳಗಿನ ಜಾವದಲ್ಲಿ ಗುಪ್ತವಾಗಿ ಕೋಣವನ್ನು ಬಲಿ ನೀಡಲಾಗಿದೆಯಂತೆ.
ಮದಲೂರು ಕೆರೆ ಈ ಬಾರಿ ಸುರಿದ ಭಾರೀ ಮಳೆಗೆ ತುಂಬಿ ಕೋಡಿ ಬಿದ್ದಿದೆ. ನೈಸರ್ಗಿಕ ಹಳ್ಳಗಳಿಂದ ಹರಿದು ಬಂದ ನೀರಿನಿಂದ ಮದಲೂರು ಕೆರೆ ಕೋಡಿ ಬಿದ್ದಿದ್ದು, ಇದಕ್ಕೆ ಆಹುತಿಯಾಗಿ ಕೋಣನ ಬಲಿ ನೀಡಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇದನ್ನೂ ಓದಿ :42 ವರ್ಷಗಳ ನಂತರ ಕೋಡಿ ಬಿದ್ದ ಕೆರೆ.. ಮಳೆಯಲ್ಲೇ ನೀರಿಗಿಳಿದು ಗ್ರಾಮಸ್ಥರಿಂದ ಡ್ಯಾನ್ಸ್ - VIDEO