ತುಮಕೂರು: ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಐರ್ಲ್ಯಾಂಡ್ ಹಾಗೂ ಅಮೆರಿಕದ ಎರಡು ಗಂಡು ಕುದುರೆಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಕುಣಿಗಲ್ ಸ್ಟಡ್ ಫಾರಂನಲ್ಲಿ ನಡೆದಿದೆ. ಐರ್ಲ್ಯಾಂಡ್ ದೇಶದ ಹತ್ತು ವರ್ಷದ ಸನಸ್ ಪರ್ ಅಕ್ಚಮ್ ಕುದುರೆ ಹಾಗೂ ಅಮೆರಿಕದ 15 ವರ್ಷದ ಏರ್ ಸಪೋರ್ಟ್ ಕುದುರೆ ಹೆಜ್ಜೇನು ದಾಳಿಗೆ ಸಾವನ್ನಪ್ಪಿವೆ.
ಎಂದಿನಂತೆ ಬುಧವಾರ ಏರ್ ಸಪೋರ್ಟ್, ಸನಸ್ ಪರ್ ಅಕ್ಚಮ್ ಈ ಎರಡು ಕುದುರೆಗಳನ್ನು ಸ್ಟಾಲಿನ್ ಪ್ಯಾಡಕ್‌ಗೆ ಮೇಯಲು ಬಿಡಲಾಗಿತ್ತು. ಆದರೆ ಮಧ್ಯಾಹ್ನ ಸುಮಾರು ಒಂದು ಗಂಟೆ ಸಮಯದಲ್ಲಿ ದಿಢೀರನೇ ಸಾವಿರಾರು ಹೆಜ್ಜೇನುಗಳು ಎರಡು ಕುದುರೆಗಳ ಮೇಲೆ ಏಕಾ ಏಕಿ ದಾಳಿ ಮಾಡಿದವು. ಜೇನು ಹುಳುಗಳ ದಾಳಿಗೆ ಎರಡು ಕುದುರೆಗಳು ಕಿರುಚುತ್ತ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದವು. ಇದನ್ನು ಗಮನಿಸಿದ ಇಲ್ಲಿನ ಕಾರ್ಮಿಕರು ವೈದ್ಯರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿದ ವೈದ್ಯರ ತಂಡ ದಾಳಿಯಲ್ಲಿ ಗಾಯಗೊಂಡ ಕುದುರೆಗಳಿಗೆ ಸ್ಟಡ್ ಫಾರಂನಲ್ಲಿ ಚಿಕಿತ್ಸೆ ನೀಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ 10 ಗಂಟೆ ವೇಳೆ ಸನಸ್ ಪರ್ ಅಕ್ಚಮ್ ಕೊನೆಯುಸಿರೆಳೆದರೆ. ಏರ್ ಸಪೋರ್ಟ್ ಕುದುರೆ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದೆ.
ಅಮೆರಿಕದ ಏರ್ ಸಪೋರ್ಟ್ ಕುದುರೆಯು ವರ್ಜಿನಿಯಾ ಡರ್ಬಿಯಲ್ಲಿ ಭಾಗಿಯಾಗಿದೆ. ಪಿಲ್ಗ್ರಮಾ ಸ್ಟೇಕ್ಸ್, ಟ್ರಾನ್ಸ್ಲೇನಿಯಾ ಸ್ಟೇಕ್ಸ್, ಎರಡನೇ ಯುನೈಟೆಡ್ ನೇಷನ್ಸ್ ಸ್ಟೇಕ್ಸ್, ಮೂರನೇ ಅಮೆರಿಕನ್ ಟರ್ಫ್ ಸ್ಟೇಕ್ಸ್, ಎರಡನೇ ಹಿಲ್ ಪ್ರಿನ್ಸ್ ಸ್ಟೇಕ್ಸ್ ರೇಸಿನಲ್ಲಿ ಜಯಗಳಿಸಿ ಕೋಟ್ಯಾಂತ ರೂಪಾಯಿ ಸಂಪಾದಿಸಿದೆ ಎಂದು ತಿಳಿದುಬಂದಿದೆ. ಐರಲ್ಯಾಂಡ್ ದೇಶದ ಹತ್ತು ವರ್ಷದ ಸನಸ್ ಪರ್ ಅಕ್ಚಮ್ ಕುದುರೆ ಐದು ಸ್ಟಾರ್ ಕುದುರೆ ರೇಸ್‌ನಲ್ಲಿ ಮೂರು ಬಾರಿ ಜಯಭೇರಿ ಸಾಧಿಸಿ ಲಾಭ ತಂದು ಕೊಟ್ಟಿದೆ. ಕುದುರೆ ರೇಸಿನಲ್ಲಿ ಉತ್ತಮ ಸಾಧನೆ ಮಾಡಿರುವ ಈ ಎರಡು ಕುದುರೆಗಳನ್ನು ಅಮೆರಿಕ ಹಾಗೂ ಐರ್ಲ್ಯಾಂಡ್ ದೇಶಗಳಿಂದ ಕಳೆದ ಆರು ವರ್ಷದ ಹಿಂದೆ ಯುಆರ್‌ಬಿಬಿ ತಲಾ ಒಂದು ಕೋಟಿ ರೂ.ಗಳಂತೆ ಎರಡು ಕೋಟಿ ರೂಗಳಿಗೆ ಖರೀದಿಸಿ ತರಲಾಗಿತ್ತು. ಇನ್ನು ಈ ಬ್ರೀಡ್ ತಳಿಯ ಕುದುರೆಗಳಿಂದ ಕುದುರೆ ಮರಿ ತಳಿಗಳನ್ನು ಉತ್ಪಾದಿಸಲಾಗುತ್ತಿತ್ತು ಎಂದು ಫಾರ್ಮ ನ ವ್ಯವಸ್ಥಾಪಕ ಲೋಕೇಶ್ ತಿಳಿಸಿದ್ದಾರೆ.