ತುಮಕೂರು: ತುಮಕೂರು ವಿಶ್ವವಿದ್ಯಾನಿಲಯ ಒಂದಲ್ಲ ಇನ್ನೊಂದು ಕಾರಣಕ್ಕೆ ವಿವಾದ ಸೃಷ್ಟಿಸಿಕೊಂಡು ಸುದ್ದಿಯಾಗುತ್ತಲೇ ಸಾಗಿದೆ. ಈಗ ಸ್ನಾತಕೋತ್ತರ ಪದವಿಯ 2ನೇ ಹಾಗೂ 4ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸದೇ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ವಿವಿಗಳು ಫಲಿತಾಂಶ ನೀಡುವುದನ್ನು ವಿಳಂಬ ಮಾಡುತ್ತಿರುವ ಬಗ್ಗೆ ವಿಧಾನ ಮಂಡಳ ಅಧಿವೇಶನದಲ್ಲೂ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರೇ ಉತ್ತರವನ್ನೂ ನೀಡಿದ್ದಿದೆ.
ಸಾಕಷ್ಟು ಕೋರ್ಸ್‌ಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ:ಪರೀಕ್ಷೆ ನಡೆದು ಮೂರು ತಿಂಗಳಾಗಿದ್ದು, ಮೌಲ್ಯಮಾಪನ ಪೂರ್ಣಗೊಂಡು ಎರಡು ತಿಂಗಳು ಕಳೆದಿದೆ. ಆದರೆ ಈವರೆಗೂ ಫಲಿತಾಂಶ ನೀಡಿಲ್ಲ. ವಿದ್ಯಾರ್ಥಿಗಳು ಕೋರ್ಸ್ ಮುಗಿಸಿ ಹೊರ ಬಂದಿದ್ದರೂ ಫಲಿತಾಂಶಕ್ಕಾಗಿ ಪರದಾಡುವುದು ಮಾತ್ರ ತಪ್ಪಿಲ್ಲ. ಅಂಕಪಟ್ಟಿ, ಇತರ ದಾಖಲೆಗಳು ಇಲ್ಲದೇ ಉದ್ಯೋಗಕ್ಕೂ ಪ್ರಯತ್ನ ನಡೆಸುವುದು ಕಷ್ಟಕರವಾಗಿದೆ.
ಕೇಂದ್ರ, ರಾಜ್ಯ ಸರ್ಕಾರ, ಇತರೆ ಸಾರ್ವಜನಿಕ ಸಂಸ್ಥೆಗಳು ಉದ್ಯೋಗಕ್ಕೆ ಅರ್ಜಿ ಕರೆದಿದ್ದರೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನ ಸೇರಿದಂತೆ ಇತರ ಸೌಲಭ್ಯ ಪಡೆಯಲು ಅಂಕಪಟ್ಟಿ ಇಲ್ಲದೇ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸುವ ಅವಧಿ ಡಿ.31ಕ್ಕೆ ಕೊನೆಗೊಳ್ಳುತ್ತಿದ್ದು, ಈ ಸೌಲಭ್ಯದಿಂದಲೂ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ.
ಒಂದೆರಡು ದಿನದಲ್ಲಿ ಫಲಿತಾಂಶ ಪ್ರಕಟಿಸಿದರೂ ತಕ್ಷಣಕ್ಕೆ ಅಂಕಪಟ್ಟಿ ಸಿಗುವುದಿಲ್ಲ. ಅಂಕಪಟ್ಟಿ ಪಡೆದುಕೊಂಡು ಅರ್ಜಿ ಸಲ್ಲಿಸುವುದರ ಒಳಗೆ ಸಮಯ ಮೀರಿರುತ್ತದೆ. ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಈ ಬಾರಿ ಪ್ರೋತ್ಸಾಹ ಧನ ಪಡೆಯುವುದರಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.