ತುಮಕೂರು :ಜಿಲ್ಲೆಯಲ್ಲಿಮೊದಲ ಹಂತದಲ್ಲಿ 19,435 ಮಂದಿ ಫ್ರೆಂಟ್‌ಲೈನ್ ವಾರಿಯರ್ಸ್‌ಗೆ ಲಸಿಕೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ವ್ಯಾಕ್ಸಿನ್ ನೀಡುವ ಕುರಿತಂತೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಪ್ರತಿಕ್ರಿಯೆ.. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಒಟ್ಟು 132 ಲಸಿಕಾ ಕೇಂದ್ರಗಳಲ್ಲಿ ಕೋವಿಡ್ಗೆ ಲಸಿಕೆ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ. ಒಂದು ದಿನದಲ್ಲಿ ಒಂದು ಲಸಿಕಾ ಕೇಂದ್ರದಲ್ಲಿ ನೂರು ಜನಕ್ಕೆ ಲಸಿಕೆ ನೀಡಬಹುದಾಗಿದೆ ಎಂದಿದ್ದಾರೆ.
ಕೋಲ್ಡ್ ಸ್ಟೋರೇಜ್‌ನಲ್ಲಿ ಲಸಿಕೆಗಳನ್ನ ಇಡಲಾಗುವುದು, ಬಳಿಕ ಎಲ್ಲಾ 132 ಲಸಿಕಾ ಕೇಂದ್ರಕ್ಕೂ ಸರಬರಾಜು ಮಾಡಲಾಗುತ್ತದೆ. ಅಲ್ಲದೇ ಈಗಾಗಲೇ ಕೋವಿಡ್ ಪೋರ್ಟಲ್ ಮೂಲಕ ಲಸಿಕೆ ಪಡೆಯೋಕೆ ಎಲ್ಲರ ವಿವರವನ್ನೂ ಅಪ್ಡೇಟ್ ಮಾಡಿದ್ದೇವೆ. ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಜನವರಿ 16ರಂದು ಮೊದಲ ಹಂತದ ಲಸಿಕೆ ನೀಡುವುದನ್ನ ಪ್ರಾರಂಭಿಸಲಾಗುವುದು. ಜಿಲ್ಲೆಯ ಎಲ್ಲಾ ಜನರಲ್ ಆಸ್ಪತ್ರೆಯಲ್ಲಿ ಲಸಿಕೆ ನೀಡೋಕೆ ತಯಾರಿ ಮಾಡಿಕೊಳ್ಳಲಾಗಿದೆ. ಮೊದಲ ಹಂತದ ಲಸಿಕಾ ಕಾರ್ಯವನ್ನ ಎರಡ್ಮೂರು ದಿನದಲ್ಲಿ ಪೂರ್ಣ ಗೊಳಿಸಲಾಗುವುದು ಎಂದರು.
ಈಗಾಗಲೇ ಪೂರ್ವಭಾವಿಯಾಗಿ ಮಾಡಬೇಕಾದ ಡ್ರೈ ರನ್ ಕೂಡ ಯಶಸ್ವಿಯಾಗಿ ಮಾಡಲಾಗಿದೆ. ಸದ್ಯಕ್ಕೆ ಯಾವುದೇ ರೀತಿಯ ತೊಂದರೆಗಳಿಲ್ಲ. ಒಂದು ಕೋವಿಡ್ ಬಾಟಲಿಯಲ್ಲಿ ಹತ್ತು ಲಸಿಕೆ ಹಾಕಬಹುದು. ಪ್ರತಿ ತಾಲೂಕು ಆಸ್ಪತ್ರೆಯಲ್ಲೂ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲಾಗಿದೆ. ತುಮಕೂರು ನಗರ ಸೇರಿ ತುಮಕೂರು ತಾಲೂಕಿನಲ್ಲಿ ಒಟ್ಟು 22 ಲಸಿಕಾ ಕೇಂದ್ರಗಳಿವೆ ಎಂದು ತಿಳಿಸಿದರು.
ಒಂದು ಲಸಿಕಾ ಕೇಂದ್ರದ ಸುತ್ತಮುತ್ತಲಿರೋ ಎಲ್ಲಾ ಫ್ರೆಂಟ್‌ಲೈನ್ ವರ್ಕರ್ಸ್‌ಗೂ ಆ ಲಸಿಕಾ ಕೇಂದ್ರಕ್ಕೆ ಟ್ಯಾಗ್ ಮಾಡಿ ಅವರಿಗೆ ಮೆಸೇಜ್ ಕಳಿಸಲಾಗುತ್ತೆ. ಲಸಿಕೆಗಳನ್ನ ಇರಿಸೋ ಕೋಲ್ಡ್ ಸ್ಟೋರೇಜ್ ಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ಬೆಸ್ಕಾಂ ಇಲಾಖೆಯವರಿಗೂ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.