ತುಮಕೂರು: ನಗರದಲ್ಲಿ ಕೈಗೊಂಡಿರುವ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿ ಯೋಜನೆ ಪೂರ್ಣಗೊಂಡ ಬಳಿಕ ಆ ರಸ್ತೆಯಲ್ಲಿ ಮತ್ತೆ ಯಾವುದೇ ಕಾಮಗಾರಿಗೆ ಅಗೆಯಲು ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಯ ಈ ಒಂದು ಆದೇಶ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ.
ಸ್ಮಾರ್ಟ್ ಸಿಟಿ ಯೋಜನೆ ಅನುದಾನ ಸೋರಿಕೆಗೆ ಅಂಕುಶ ಹಾಕಿದ ಜಿಲ್ಲಾಧಿಕಾರಿ..! - etv bharat
ಸ್ಮಾರ್ಟ್ ಸಿಟಿ ಯೋಜನೆಗಾಗಿ ನಗರದ ವಿವಿಧಡೆ ರಸ್ತೆ ಅಗೆಯಲಾಗುತ್ತಿದ್ದು ಇದರಿಂದ ಸಾಕಷ್ಟು ತೊಂದರೆ ಆಗುತ್ತಿದೆ ಎಂಬ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿಯು ಮಹತ್ವದ ನಿರ್ಣಯವೊಂದನ್ನು ತೆಗೆದುಕೊಂಡಿದ್ದಾರೆ.
ಸ್ಮಾರ್ಟ್ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನ ವಿವಿಧ ಇಲಾಖೆಗಳ ವತಿಯಿಂದ ಕೈಗೊಳ್ಳಬಹುದಾದಂತಹ ಕುಡಿಯುವ ನೀರು, ವಿದ್ಯುತ್, ಗ್ಯಾಸ್, ಬೀದಿದೀಪ, ನೀರಿನ ಸಂಪರ್ಕ, ಬಿಎಸ್ಎನ್ಎಲ್ ಕೇಬಲ್ ಅಳವಡಿಕೆ ಸೇರಿದಂತೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಹೊಸದಾಗಿ ರಸ್ತೆ ಕಾಮಗಾರಿಯಲ್ಲಿ ಯಾವುದೇ ಕಾಮಗಾರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಲ್ಲದೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಸ್ಮಾರ್ಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ನಂತರ ಅತ್ಯಾವಶ್ಯಕ ಕಾಮಗಾರಿಗಳು ಇದ್ದಲ್ಲಿ ಸಂಬಂಧಪಟ್ಟವರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮನ್ವಯ ಸಮಿತಿ ಸಭೆಯಲ್ಲಿ ಮಂಡಿಸಿ ಪೂರ್ವಾನುಮತಿ ಪಡೆದುಕೊಳ್ಳಬೇಕು. ತಪ್ಪಿದಲ್ಲಿ ಅಂತಹ ಇಲಾಖೆಯ ಮುಖ್ಯಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಯ ದಿಟ್ಟ ನಿರ್ಧಾರಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.