ಕರ್ನಾಟಕ

karnataka

ETV Bharat / state

ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ರಂಗಾಭಿರುಚಿ... ಡಮರುಗ ರಂಗತಂಡದಿಂದ ತರಬೇತಿ

ತುಮಕೂರಿನ ಮೇಲೇಹಳ್ಳಿ ಗ್ರಾಮದಲ್ಲಿ ಡಮರುಗ ರಂಗ ಸಂಪನ್ಮೂಲ ಕೇಂದ್ರವು ಮಕ್ಕಳಿಗೆ ಬೇಸಿಗೆ ಶಿಬಿರದ ನಿಮಿತ್ತವಾಗಿ ನಾಟಕ, ನೃತ್ಯ ಕಲಿಸುತ್ತಿದೆ.

By

Published : May 15, 2019, 7:36 PM IST

ನಾಟಕ ತರಬೇತಿಯಲ್ಲಿ ತೊಡಗಿಕೊಂಡಿರುವ ಮಕ್ಕಳು

ತುಮಕೂರು: ಸಾಮಾನ್ಯವಾಗಿ ಬೇಸಿಗೆ ಶಿಬಿರಗಳು ಎಂದರೆ ಮಕ್ಕಳಿಗೆ ಆಟ, ವಿವಿಧ ರೀತಿಯ ಕಲೆ ಇನ್ನಿತರ ಚಟುವಟಿಕೆಗಳನ್ನು ಪರಿಚಯಿಸಿಕೊಡಲಾಗುತ್ತದೆ. ಆದರೆ, ಜಿಲ್ಲೆಯಲ್ಲಿನ ಈ ಒಂದು ಬೇಸಿಗೆ ಶಿಬಿರ ಕೊಂಚ ವಿಶೇಷವಾಗಿದೆ. ನಾಟಕ ಕಲೆಯ ತರಬೇತಿಯನ್ನು ಪ್ರಧಾನವಾಗಿ ಇರಿಸಿಕೊಂಡೆ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದೆ.

ಹೌದು.. ಸಿನಿಮಾ ಹಾಗೂ ಸಾಮಾಜಿಕ ಜಾಲತಾಣಗಳ ಹಾವಳಿಯಲ್ಲಿ ನಾಟಕ, ರಂಗಭೂಮಿ ಗೌಣವಾಗುತ್ತಿದೆ. ಅದರೆಡೆಗೆ ಯುವ ಮನಸ್ಸುಗಳನ್ನು ಸೆಳೆಯಲು ತುಮಕೂರು ತಾಲೂಕಿನ ಮೇಲೇಹಳ್ಳಿ ಗ್ರಾಮದಲ್ಲಿ ಡಮರುಗ ರಂಗ ಸಂಪನ್ಮೂಲ ಕೇಂದ್ರವು ಮಕ್ಕಳಿಗೆ ರಂಗಕಲೆಯ ಶಿಬಿರವನ್ನು ಆಯೋಜಿಸಿದೆ.

ತುಮಕೂರು ಡಮರುಗ ರಂಗ ಸಂಪನ್ಮೂಲ ಕೇಂದ್ರ

ಮೇಳೆಹಳ್ಳಿ ಸೇರಿದಂತೆ‌ ಅಕ್ಕ ಪಕ್ಕದ ಗ್ರಾಮದ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಡಮರುಗ ರಂಗ ಸಂಪನ್ಮೂಲ ಕೇಂದ್ರದಲ್ಲಿ ನಾಟಕ, ನೃತ್ಯ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಸರ್ಕಾರಿ ಶಾಲೆ ಮಕ್ಕಳಿಗೆ ಇಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಿ ಕೊಡಲಾಗಿದೆ. ಹಾಸ್ಯ , ಪರಿಸರ ಹಾಗೂ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣ ಅಬ್ಬರ ಇವುಗಳನ್ನು ನಾಟಕದಲ್ಲಿ ಪ್ರಮುಖ ವಿಷಯವನ್ನಾಗಿ ತೆಗೆದುಕೊಳ್ಳಲಾದೆ.

'ಯುದ್ದ ಡಾಟ್ ಕಾಮ್, ಅಂಗ ವಂಗ ರಾಜ್ಯ, ಗಾಂಪರ ವಿದೇಶಿ ಯಾತ್ರೆ ಎಂಬ 3 ನಾಟಕಗಳನ್ನು ತರಬೇತಿ ನೀಡಿ ಶಿಬಿರಾರ್ಥಿಗಳಿಂದಲೇ ಪ್ರದರ್ಶನ ನೀಡಲಾಗುತ್ತಿದೆ.
ಇಲ್ಲಿನ ವಿದ್ಯಾರ್ಥಿಗಳು ನಾಟಕದ ಜೊತೆಗೆ ಗ್ರಾಮೀಣ ಕಲೆಗಳಾದ ಕೋಲಾಟ, ಚೋಕಬಾರ, ಅಳಗುಳಿ ಮನೆಯಂತಹ ಹಳ್ಳಿಯ ಸೊಗಡನ್ನು ತೋರಿಸುವ ಆಟಗಳನ್ನು ಹಮ್ಮಿಕೊಳ್ಳಲಾಗಿದೆ. ದೂರದರ್ಶನ, ಮೊಬೈಲ್ ಹೊರತು ಪಡಿಸಿದ ದೈಹಿಕ, ಮಾನಸಿಕ ಸದೃಢತೆಯನ್ನು ಹೆಚ್ಚಿಸುವ, ಆತ್ಮವಿಶ್ವಾಸ ತುಂಬುವ ವಾತಾವರಣವನ್ನು ಕಲ್ಪಿಸಲಾಗಿದೆ.

ತುಮಕೂರು ಡಮರುಗ ರಂಗ ಸಂಪನ್ಮೂಲ ಕೇಂದ್ರ

ನಿರಂತರವಾಗಿ ಈ ಶಿಬಿರವನ್ನ ನಡೆಸುತ್ತಿದ್ದು ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸುವ ಜತೆಗೆ ಹೊಸ ವೇದಿಕೆಯನ್ನು ವದಗಿಸಲಾಗುತ್ತಿದೆ. ಮಕ್ಕಳು ಮೊಬೈಲ್ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗುತ್ತಿದ್ದಾರೆ. ಸಾಂಸ್ಕೃತಿಕವಾಗಿ ಮಕ್ಕಳನ್ನು ಶ್ರೀಮಂತಗೊಳಿಸುವ ಕಾರ್ಯ ಆಗಬೇಕು ಎನ್ನುತ್ತಾರೆ ಶಿಬಿರದ ಆಯೋಜಕ ದೇವರಾಜ.

ದೇವರಾಜ್ ಅವರ ಕುಟುಂಬ ಕೂಡ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ನಾಟಕದ ಕಲೆ ಉಳಿವಿಗಾಗಿ ಸದಾ ಶ್ರಮಿಸುತ್ತಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ನಾಟಕ ಕಲಿಸುತ್ತಾ, ತನ್ನೂರನ್ನೇ ನಾಟಕಕಾರರ ಗ್ರಾಮ ಎಂಬಂತೆ ಬೆಳೆಸುತ್ತಿರುವುಡು ವಿಶೇಷ. ಒಟ್ಟಾರೆ ನಶಿಸಿಹೋಗುತ್ತಿರುವ ನಾಟಕ ಮತ್ತು ಗ್ರಾಮೀಣ ಕಲೆಗಳಿಗೆ ಜೀವ ತುಂಬುತ್ತಿರುವ ಡಮರುಗ ತಂಡ ಮತ್ತಷ್ಟು ಮಕ್ಕಳನ್ನು ಸಾಂಸ್ಕೃತಿಕವಾಗಿ ಮೇಲೆತ್ತುವ ಪಣ ತೊಟ್ಟಿರುವುದು ಸ್ವಾಗತಾರ್ಹವಾಗಿದೆ.

ABOUT THE AUTHOR

...view details