ತುಮಕೂರು:ಶಿರಾ ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಸಚಿವ ಟಿ.ಬಿ.ಜಯಚಂದ್ರ ಮತ್ತೊಮ್ಮೆ ವಿಧಾನಸಭೆ ಚುನಾವಣೆ ಸ್ಪರ್ಧೆಗೆ ಮುಂದಾಗುವ ಮೂಲಕ ಜಿಲ್ಲೆಯ ಹಿರಿಯ ರಾಜಕಾರಣಿಗಳ ಸಾಲಿನಲ್ಲಿ ನಿಂತಿದ್ದಾರೆ. ಅಲ್ಲದೇ ಈ ಬಾರಿಯೂ ಸ್ಪರ್ಧಿಸುತ್ತಿದ್ದು, ಇದು 11ನೇ ಬಾರಿ ಎಂಬುದು ವಿಶೇಷ. ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ 9 ಬಾರಿ ಹಾಗೂ ಒಮ್ಮೆ ಪಕ್ಷೇತರರಾಗಿ ಒಟ್ಟು 10 ಬಾರಿ ಸ್ಪರ್ಧೆ ಮಾಡಿದ್ದು, 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು 4 ಸಲ ಸೋಲು ಕಂಡಿದ್ದಾರೆ.
ವಿರೋಧ ಪಕ್ಷದ ಉಪನಾಯಕರಾಗಿ ಕರ್ತವ್ಯ: ಈಗ 11 ನೇ ಬಾರಿ ಚುನಾವಣೆ ಕಣಕ್ಕೆ ಇಳಿಯುವ ಮೂಲಕ ಅದೃಷ್ಟ ಪರೀಕ್ಷೆಗೆ ಮಾಜಿ ಸಚಿವ ಜಯಚಂದ್ರ ಮುಂದಾಗಿದ್ದಾರೆ. ಎಸ್.ಎಂ.ಕೃಷ್ಣ ಮತ್ತು ಸಿದ್ದರಾಮಯ್ಯ ಸಂಪುಟದಲ್ಲಿ ಎರಡು ಬಾರಿ ಸಚಿವರಾಗಿದ್ದು, ಒಮ್ಮೆ ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಎರಡು ಬಾರಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾಗಿಯೂ ಜಯಚಂದ್ರ ಅವರು ಕೆಲಸ ಮಾಡಿದ್ದಾರೆ.
ಇದನ್ನೂ ಓದಿ:ಬಿಜೆಪಿ ತೊರೆದು ಜೆಡಿಎಸ್ ಸೇರಿದ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ
ಕಾಂಗ್ರೆಸ್‌ನಿಂದ ಟಿಕೆಟ್ ಸಿಗದೇ ಚುನಾವಣೆಯಿಂದ ದೂರವಾಗಿದ್ದರು: ಈ ಹಿಂದೆ ಅಸ್ತಿತ್ವದಲ್ಲಿದ್ದ ಕಳ್ಳಂಬೆಳ್ಳ ವಿಧಾನಸಭೆ ಕ್ಷೇತ್ರದಿಂದ 1978 ರಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲಿಯೇ 28ನೇ ವಯಸ್ಸಿಗೆ ಶಾಸಕರಾಗಿ ಆಯ್ಕೆ ಆಗಿ ಇವರು ಗಮನ ಸೆಳೆದಿದ್ದರು. 1983 ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದೇ ಚುನಾವಣೆಯಿಂದ ದೂರ ಉಳಿದರು. 1989ರಲ್ಲಿ ಮತ್ತೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದಾಗ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಜಯಗಳಿಸುವ ಮೂಲಕ ಎರಡನೇ ಬಾರಿಗೆ ಜಯಚಂದ್ರ ವಿಧಾನಸಭೆ ಪ್ರವೇಶಿಸಿದ್ದರು.
ಸತತ ಎರಡು ಬಾರಿ ಜಯ: ನಂತರ ಕಾಂಗ್ರೆಸ್‌ನಿಂದ 1994 ಹಾಗೂ 1999 ರಲ್ಲಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. 2004ರ ಚುನಾವಣೆಯಲ್ಲಿ ಸೋಲು ಕಂಡರು. ಶಿರಾ ವಿಧಾನಸಭೆ ಕ್ಷೇತ್ರದಿಂದ 2008 ಮತ್ತು 2013ರಲ್ಲಿ ಸ್ಪರ್ಧೆ ಮಾಡಿ ಗೆದ್ದು, ಕ್ಷೇತ್ರದಲ್ಲಿ ಸತತ ಎರಡು ಬಾರಿ ಜಯಗಳಿಸಿದ ದಾಖಲೆ ಬರೆದರು, ಶಿರಾ ಕ್ಷೇತ್ರದಲ್ಲಿ ಈವರೆಗೂ ಜಯಚಂದ್ರ ಅವರನ್ನು ಹೊರತು ಪಡಿಸಿದರೆ ಯಾರು ಸತತವಾಗಿ ಎರಡು ಬಾರಿ ಗೆಲುವು ಸಾಧಿಸಿಲ್ಲ.
ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಧುಮುಕುತ್ತಿರುವ ಜಯಚಂದ್ರ: 2018 ರಲ್ಲಿ ನಡೆದ ಚುನಾವಣೆಯಲ್ಲಿ ಶಿರಾ ಕ್ಷೇತ್ರದಿಂದ ಹಾಗೂ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಅವರ ಪುತ್ರ ಸಂತೋಷ ಸ್ಪರ್ಧೆ ಮಾಡಿ ಇಬ್ಬರೂ ಸೋಲು ಕಂಡರು. ಶಿರಾ ಶಾಸಕರಾಗಿದ್ದ ಬಿ.ಸತ್ಯನಾರಾಯಣ ಅಕಾಲಿಕ ನಿಧನದಿಂದ ನಡೆದ ಉಪಚುನಾವಣೆಯಲ್ಲಿ ಕಣಕ್ಕಿಳಿದು ಪರಾಭವಗೊಂಡರು. ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಇದು ಕೊನೆಯ ಚುನಾವಣೆ ಎಂದು ಹೇಳುತ್ತಿದ್ದಾರೆ. ಇನ್ನು ಶಿರಾ ಕ್ಷೇತ್ರದ ಮತದಾರರು ಈ ಬಾರಿ ಜಯಚಂದ್ರ ಅವರಿಗೆ ವಿಜಯದ ಮಾಲೆ ಹಾಕಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಕಾಂಗ್ರೆಸ್ ಮುಖಂಡನೊಬ್ಬ ನಮ್ಮ ಪಕ್ಷವನ್ನು ಒಡೆಯಲು ಹಾಸನದಲ್ಲಿ ಬೀಡು ಬಿಟ್ಟಿದ್ದಾನೆ: ಹೆಚ್ ಡಿ ರೇವಣ್ಣ