ತುಮಕೂರು:ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ ಜಯಚಂದ್ರ ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಾಥ್ ನೀಡಿದರು.
ಇನ್ನು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಿನಿವಿಧಾನಸೌಧದ ಸುತ್ತಲೂ ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು. ಡಿ.ಕೆ ಶಿವಕುಮಾರ್ ಸ್ಥಳಕ್ಕೆ ಬರುತ್ತಿದ್ದಂತೆ ಸುತ್ತಲೂ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಡಿಕೆ, ಡಿಕೆ ಎಂಬ ಘೋಷಣೆ ಕೂಗಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ ಜಯಚಂದ್ರ ನಾಮಪತ್ರ ಸಲ್ಲಿಕೆ ನಾಮಪತ್ರ ಸಲ್ಲಿಸುವ ವೇಳೆ ಮಿನಿವಿಧಾನಸೌಧದ ಬಳಿ ಕಾಂಗ್ರೆಸ್ ಮುಖಂಡರಾದ ಲಕ್ಷ್ಮೀ ಹೆಬ್ಬಾಳ್ಕರ್, ಮುನಿಯಪ್ಪ, ಯು.ಟಿ ಖಾದರ್ ಮಾಜಿ ಸಂಸದ ಚಂದ್ರಪ್ಪ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಜಮಾಯಿಸಿದ್ದರು.
ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಇವತ್ತು ನಾವೆಲ್ಲ ಜಯಚಂದ್ರ ಅವರ ನಾಮಪತ್ರ ಸಲ್ಲಿಸಲು ಬಂದಿದ್ದೇವೆ, ಉತ್ಸಾಹವೇ ಫಲಿತಾಂಶ ಏನಾಗುತ್ತದೆ ಎಂದು ತೋರಿಸುತ್ತದೆ. ಅನುಭವಿ ಟಿ.ಬಿ ಜಯಚಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ ಅವರು ಅಧಿಕಾರದಲ್ಲಿದ್ದಾಗ ಎರಡುವರೆ ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಈ ಚುನಾವಣೆಯನ್ನು ನಾವ್ಯಾರು ಬಯಸಿರಲಿಲ್ಲ ಸತ್ಯನಾರಾಯಣ ಅವರ ಕೊನೆ ಚುನಾವಣೆ ಎಂದು ಅವರನ್ನು ಗೆಲ್ಲಿಸಿದರು. ಇಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಸರ್ಕಾರದ ಆಡಳಿತ ಸರಿಯಿಲ್ಲ ಎನ್ನುವ ಸಂದೇಶ ನೀಡಬೇಕಿದೆ ಎಂದರು.
ಇದೇ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿರಾ ಉಪಚುನಾವಣೆಯಲ್ಲಿ ಜನರು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕಾದ ಅಗತ್ಯವಿದೆ. ರಾಜ್ಯದಲ್ಲಿ ನಿಷ್ಕ್ರಿಯ ಸರ್ಕಾರವಿದೆ ಈ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಬಾರಿಸಬೇಕು. ಶಿರಾ ಹಾಗೂ ಆರ್ಆರ್ ನಗರ ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಈ ಎರಡು ಉಪ ಚುನಾವಣೆ ಮುಂದಿನ ಚುನಾವಣೆಯ ದಿಕ್ಸೂಚಿಯಾಗಲಿದೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.