ತುಮಕೂರು :ಕೊರೊನಾ ಹಿನ್ನೆಲೆ ಆರ್ಥಿಕ ಸಂಕಷ್ಟದಿಂದ ನರಳಿದ ಜಿಲ್ಲೆಯ ಜನರು ಇದೀಗ ಖದೀಮರ ಕೈಚಳಕಕ್ಕೆ ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯ ಗಡಿಭಾಗದಲ್ಲಿ ಕಳ್ಳತನ ಹೆಚ್ಚಿದೆ. ರಾತ್ರಿ-ಹಗಲು ಎನ್ನದೆ ಜನರನ್ನು ಸುಲಿಗೆ ಮಾಡುವ ಕೆಲಸ ಜೋರಾಗಿದೆ. ಜೊತೆಗೆ ಸಾಕ್ಷ್ಯಾಧಾರಗಳು ಸಿಗದಂತೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಕಾರ್ಯವೂ ನಡೆಯುತ್ತಿದೆ.
ಜಿಲ್ಲೆಯ ಕುಣಿಗಲ್ ತಾಲೂಕಿನ ರಾಮನಗರ ಗಡಿ ಭಾಗದಲ್ಲಿ ಕಳ್ಳರ ಉಪಟಳ ಜೋರಾಗಿದೆ. ಇಲ್ಲಿನ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಹಂಗರಹಳ್ಳಿ, ತಾವರೆಕೆರೆ, ಉಜ್ಜನಿ ವ್ಯಾಪ್ತಿಯಲ್ಲಿ ಜನ ಒಂಟಿಯಾಗಿ ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಲಾಕ್ಡೌನ್ನಿಂದ ಕಂಗೆಟ್ಟಿದ್ದ ಜನರಿಗೆ ಇದೀಗ ಕಳ್ಳರ ಭೀತಿ ಹೆಚ್ಚಾಗಿದೆ. ಗ್ರಾಮದ ಹೊರವಲಯದಲ್ಲಿ ಒಬ್ಬಂಟಿಯಾಗಿ ಓಡಾಡುವ ವೇಳೆ ಖದೀಮರ ಗುಂಪು ಏಕಾಏಕಿ ದಾಳಿ ನಡೆಸಿ ಚಿನ್ನಾಭರಣ-ಹಣ ದೋಚುತ್ತಿದ್ದಾರೆ.
ಮಹಿಳೆಯರೇ ಟಾರ್ಗೆಟ್ : ಕೊರೊನಾ ಕಾರಣದಿಂದ ಕೆಲಸ ಕಳೆದುಕೊಂಡ ಯುವಕರು, ಬೆಂಗಳೂರು ತೊರೆದು ಹಳ್ಳಿಗಳಿಗೆ ಬಂದಿದ್ದಾರೆ. ಇದರಲ್ಲಿ ಕೆಲವರು ಮದ್ಯ, ಜೂಜಿನ ಮೋಹಕ್ಕೆ ಬಿದ್ದು, ಹಣಕ್ಕಾಗಿ ಕಳ್ಳತನಕ್ಕೆ ಇಳಿದಿದ್ದಾರೆ. ಬೈಕ್ನಲ್ಲಿ ಹೋಗುವ ಜನರನ್ನು ಅಡ್ಡಗಟ್ಟಿ ದೋಚಲಾಗುತ್ತಿದೆ. ಅಲ್ಲದೆ ಹೊಲಗಳಲ್ಲಿ ಕೆಲಸ ಮಾಡುವ ಒಂಟಿ ಮಹಿಳೆಯರನ್ನು ಈ ಖದೀಮರ ತಂಡ ಟಾರ್ಗೆಟ್ ಮಾಡಿದೆ. ಇದರಿಂದ ರೈತ ಮಹಿಳೆಯರು ಹೊಲದಲ್ಲಿ ಕೆಲಸ ಮಾಡಲು ಹೆದರುವಂತಾಗಿದೆ.