ತುಮಕೂರು :ಕೋವಿಡ್-19 ನಿಯಮಗಳನುಸಾರವೇ ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಈ ಕುರಿತಂತೆ ಅವರುಗಳಿಂದ ಲಿಖಿತ ಹೇಳಿಕೆಗಳನ್ನು ಕೂಡ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ತಿಳಿಸಿದ್ದಾರೆ.
ಕೋವಿಡ್ ನಿಯಮಗಳನ್ನನುಸರಿಸಿ ಪ್ರತಿಭಟನೆ ನಡೆಸಬೇಕು.. ಜಿಲ್ಲಾ ಪೊಲೀಸ್ ವರಿಷ್ಠ ವಂಶಿಕೃಷ್ಣ ಈ ಕುರಿತು ಹೇಳಿಕೆ ನೀಡಿರುವ ಅವರು, ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕೆಂದು ಈಗಾಗಲೇ ಸೂಚನೆ ನೀಡಲಾಗಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೆ ಕಡ್ಡಾಯವಾಗಿ ಬಂಧಿಸುವುದಾಗಿ ಈಗಾಗಲೇ ಪ್ರತಿಭಟನಾಕಾರರಿಗೆ ತಿಳಿಸಲಾಗಿದೆ ಎಂದಿದ್ದಾರೆ. ಯಾವುದೇ ರೀತಿಯ ರಸ್ತೆ ತಡೆ ಮತ್ತು ಹೆದ್ದಾರಿ ತಡೆ ಮಾಡಬಾರದು ಎಂದು ಈಗಾಗಲೇ ತಿಳಿಸಲಾಗಿದೆ. ಇಂತಹ ಪ್ರತಿಭಟನೆ ತಡೆಯಲು ಪೊಲೀಸರು ಕೂಡ ಸರ್ವ ಸನ್ನದ್ಧರಾಗಿದ್ದಾರೆ. ಕೆಎಸ್ಆರ್ಟಿಸಿ ಬಸ್ ಸಂಚಾರದಲ್ಲಿ ಯಾವುದೇ ರೀತಿಯ ವ್ಯತ್ಯಯ ಆಗಬಾರದು ಎಂದಿದ್ದಾರೆ.
ಸೆಪ್ಟೆಂಬರ್ 28ರಂದು ರೈತ ಸಂಘವೂ ಸೇರಿ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದ್ ಹಿನ್ನೆಲೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಲು ಅವಕಾಶವಾಗದಂತೆ ತುಮಕೂರು ಜಿಲ್ಲೆಯಾದ್ಯಂತ 700ಕ್ಕೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ. ಮೂರು ಕೆಎಸ್ಆರ್ಪಿ ಹಾಗೂ ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗುತ್ತಿದೆ. ಅಲ್ಲದೆ ರೈತ ಸಂಘ ಸೇರಿ ವಿವಿಧ ಸಂಘಟನೆಗಳು ಈ ನಿಯಮಗಳನ್ನು ಪಾಲನೆ ಮಾಡುವುದಾಗಿ ಲಿಖಿತರೂಪದಲ್ಲಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆ ಸಂದರ್ಭದಲ್ಲಿ ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸುವುದು, ರಸ್ತೆಗಳಲ್ಲಿ ಟೈರುಗಳಿಗೆ ಬೆಂಕಿ ಹಚ್ಚುವುದನ್ನೆಲ್ಲಾ ಮಾಡಬಾರದು ಎಂದು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.