ಕರ್ನಾಟಕ

karnataka

ETV Bharat / state

ಸೇನೆಗೆ ತುಮಕೂರಿನಲ್ಲಿ ಹೆಲಿಕಾಪ್ಟರ್​ ತಯಾರಿ.. ಕಾರ್ಖಾನೆ ಉದ್ಘಾಟಿಸಿದ ಪ್ರಧಾನಿ ಮೋದಿ - ಭಾರತೀಯ ಸೇನೆಗೆ ಯುದ್ಧ ಹೆಲಿಕಾಪ್ಟರ್

ತುಮಕೂರಿನಲ್ಲಿ ಹೆಲಿಕಾಪ್ಟರ್​ ಕಾರ್ಖಾನೆ ಉದ್ಘಾಟನೆ- ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​ ಕಾರ್ಖಾನೆ- ಭಾರತೀಯ ಸೇನೆಗೆ ಯುದ್ಧ ಹೆಲಿಕಾಪ್ಟರ್ ತಯಾರು - ಕಾರ್ಖಾನೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

helicopter-factory-in-tumkuru
ಸೇನೆಗೆ ತುಮಕೂರಿನಲ್ಲಿ ಹೆಲಿಕಾಪ್ಟರ್​ ತಯಾರಿ

By

Published : Feb 6, 2023, 6:18 PM IST

Updated : Feb 6, 2023, 6:59 PM IST

ತುಮಕೂರು:ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ತುಮಕೂರಿನಲ್ಲಿ ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​ ನಿರ್ಮಾಣ ಮಾಡಿರುವ ಭಾರತೀಯ ಸೇನೆಗೆ ಯುದ್ಧ ಹೆಲಿಕಾಪ್ಟರ್​ಗಳನ್ನು ತಯಾರಿಸುವ ಕಾರ್ಖಾನೆಯನ್ನು ಉದ್ಘಾಟಿಸಿದರು. ಇದೇ ವೇಳೆ, ಕಾರ್ಖಾನೆಯಲ್ಲಿ ತಯಾರಿಸಿರುವ ಲಘು ಹೆಲಿಕಾಪ್ಟರ್​ ಅನ್ನು ಅನಾವರಣಗೊಳಿಸಿದರು. ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ಎಂಬಲ್ಲಿ 615 ಎಕರೆ ಜಾಗದಲ್ಲಿ ಹೆಲಿಕಾಪ್ಟರ್ ಘಟಕ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು 2016 ರಲ್ಲಿ ಶಂಕುಸ್ಥಾಪನೆ ಮಾಡಿದ್ದರು. ಹೆಲಿಪ್ಯಾಡ್, ಫ್ಲೈಟ್ ಹ್ಯಾಂಗಾರ್, ಅಡ್ಮಿನ್ ಕಟ್ಟಡ ಸೇರಿ ಕೆಲವಾರು ಸೌಲಭ್ಯಗಳನ್ನು ಈಗ ನಿರ್ಮಿಸಲಾಗಿದೆ. ಇಂದಿನಿಂದ ಮೊದಲ ಹಂತದ ಕಾರ್ಯಾಚರಣೆಗಳು ಇಲ್ಲಿ ಆರಂಭವಾಗಿವೆ.

ಭಾರತೀಯ ಸೇನೆಗೆ ಯುದ್ಧ ಸಾಮಗ್ರಿಗಳನ್ನು ತಯಾರಿಸಿಕೊಡುವ ಹೆಚ್​ಎಎಲ್ ಬಳಿ ಯುದ್ಧ ಹೆಲಿಕಾಪ್ಟರ್ ನಿರ್ಮಿಸುವ ಬಹಳಷ್ಟು ಯೋಜನೆಗಳಿವೆ. ಇದಕ್ಕೆ ಬೆಂಗಳೂರಿನಲ್ಲಿರುವ ಹೆಚ್​ಎಲ್​ನ ಮುಖ್ಯ ತಯಾರಕಾ ಸಂಕೀರ್ಣ ಸಾಕಾಗದೇ ಇರುವುದರಿಂದ ತುಮಕೂರಿನಲ್ಲಿ ಹೊಸದಾದ ಬೃಹತ್ ಘಟಕವನ್ನು ನಿರ್ಮಿಸಲಾಗಿದೆ.

ಸಾವಿರಕ್ಕೂ ಅಧಿಕ ಹೆಲಿಕಾಪ್ಟರ್​ ತಯಾರಿ ಗುರಿ:ತುಮಕೂರಿನಲ್ಲಿನ ಹೆಲಿಕಾಪ್ಟರ್ ಕಾರ್ಖಾನೆಯಲ್ಲಿ ಮೊದಲಿಗೆ ಲೈಟ್ ಯುಟಿಲಿಟಿ ಹೆಲಿಕಾಪ್ಟರ್​ಗಳನ್ನು (LUH Copters) ತಯಾರಿಸಲಾಗುತ್ತದೆ. ನಂತರ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್​(LCH) ಮತ್ತು ಮಲ್ಟಿರೋಲ್​ಗಳನ್ನು (IMRH) ತಯಾರಿಸಲಾಗುತ್ತದೆ. ಕಾರ್ಖಾನೆಯು ಭವಿಷ್ಯದಲ್ಲಿ ಹೆಲಿಕಾಪ್ಟರ್​ಗಳ ರಫ್ತು ಮಾಡುವ ಸಾಮರ್ಥ್ಯವನ್ನು ಕೂಡ ಹೊಂದಿದೆ.

ಈ ಕಾರ್ಖಾನೆಯು ಭಾರತಕ್ಕೆ ತನ್ನ ಸಂಪೂರ್ಣ ಹೆಲಿಕಾಪ್ಟರ್‌ಗಳ ಅಗತ್ಯವನ್ನು ಸ್ಥಳೀಯವಾಗಿ ಪೂರೈಸಲು ಅನುವು ಮಾಡಿಕೊಡುತ್ತದೆ. ಭಾರತದಲ್ಲಿ ಹೆಲಿಕಾಪ್ಟರ್ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಸ್ವಾವಲಂಬನೆಯನ್ನು ಸಕ್ರಿಯಗೊಳಿಸುವ ಹೆಗ್ಗಳಿಕೆಯನ್ನು ಪಡೆಯುತ್ತದೆ. ಮುಂದಿನ 20 ವರ್ಷಗಳಲ್ಲಿ ತುಮಕೂರಿನಿಂದ 3 ರಿಂದ 15 ಟನ್‌ಗಳ ತೂಕದ 1000 ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸಲು ಹೆಚ್​ಎಎಲ್​ ಯೋಜಿಸಿದೆ. ಇದರಿಂದ ಈ ಪ್ರದೇಶದಲ್ಲಿ ಸುಮಾರು 6000 ಜನರಿಗೆ ಉದ್ಯೋಗ ದೊರೆಯಲಿದೆ.

ಹೂಡಿಕೆಗೆ ಕರ್ನಾಟಕವೇ ಮೊದಲ ಆಯ್ಕೆ:ಹೆಲಿಕಾಪ್ಟರ್​ ತಯಾರಿ ಕಾರ್ಖಾನೆ ಉದ್ಘಾಟನೆ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಡಬಲ್​ ಎಂಜಿನ್​ ಸರ್ಕಾರದಿಂದ ಹೂಡಿಕೆದಾರರಿಗೆ "ಕರ್ನಾಟಕ ಮೊದಲ ಆಯ್ಕೆ"ಯನ್ನಾಗಿ ಮಾಡಿದೆ. ಹೆಲಿಕಾಪ್ಟರ್​ ಕಾರ್ಖಾನೆ ಉದ್ಘಾಟನೆಯೇ ಇದಕ್ಕೆ ಉದಾಹರಣೆ ಎಂದು ಹೇಳಿದರು.

ತುಮಕೂರಿಗೆ ಇಂದು ದೊಡ್ಡ ಹೆಲಿಕಾಪ್ಟರ್ ಫ್ಯಾಕ್ಟರಿ ಸಿಕ್ಕಿದೆ. ಕರ್ನಾಟಕವು ಯುವ ಪ್ರತಿಭೆ ಮತ್ತು ನಾವೀನ್ಯತೆಯ ನಾಡಾಗಿದೆ. ಡ್ರೋನ್ ತಯಾರಿಕೆಯಿಂದ ಹಿಡಿದು ತೇಜಸ್ ಯುದ್ಧ ವಿಮಾನ ಉತ್ಪಾದನಾ ಶಕ್ತಿಯನ್ನು ಕರ್ನಾಟಕ ಹೊಂದಿದೆ. ಇದು ಜಗತ್ತಿನ ಗಮನ ಸೆಳೆದಿದೆ. ಇದು ರಾಜ್ಯವನ್ನು ಹೂಡಿಕೆದಾರರ ಮೊದಲ ಆಯ್ಕೆಯನ್ನಾಗಿ ಮಾಡಿದೆ ಎಂದರು.

ಭದ್ರತಾ ಸಾಮಗ್ರಿಗಳಲ್ಲಿ ಸ್ವಾವಲಂಬನೆ:ಸೇನಾ ಸಾಮಗ್ರಿಗಳಲ್ಲಿ ವಿದೇಶಗಳ ಮೇಲೆ ಭಾರತ ಅವಲಂಬಿತವಾಗಿರುವುದನ್ನು ಕಡಿಮೆ ಮಾಡಲಾಗಿದೆ. ಆಕ್ರಮಣಕಾರಿ ರೈಫಲ್‌ಗಳು, ವಿಮಾನವಾಹಕ ನೌಕೆಗಳು, ಫೈಟರ್ ಜೆಟ್‌ಗಳು ಈಗ ದೇಶದಲ್ಲೇ ತಯಾರಿಸಲಾಗುತ್ತಿದೆ. ಇದು ಆತ್ಮನಿರ್ಭರ್​ ಭಾರತದ ಪ್ರತೀಕ ಎಂದು ಅಭಿಪ್ರಾಯಪಟ್ಟರು.

ಓದಿ:ಜಾಗತಿಕ ಉದ್ಯಮಿಗಳು ಹಸಿರು ಇಂಧನ ಅನ್ವೇಷಣೆಯಲ್ಲಿ ತೊಡಗಿಕೊಳ್ಳಿ: ಮೋದಿ ಕರೆ

Last Updated : Feb 6, 2023, 6:59 PM IST

For All Latest Updates

ABOUT THE AUTHOR

...view details