ತುಮಕೂರು: ಸಮ್ಮಿಶ್ರ ಸರ್ಕಾರದಲ್ಲಿ ನಾನು ಸರ್ಕಾರದ ಒಂದು ಅಂಗವಾಗಿದ್ದೆ. ಹಾಗಾಗಿ ನನ್ನ ಫೋನ್ ಕೂಡಾ ಕದ್ದಾಲಿಕೆ ಮಾಡಲಾಗುತ್ತಿತ್ತು. ಈ ಕಾರಣ ನಾನು ನನ್ನ ಫೋನ್ ನಂಬರ್ ಬದಲಾಯಿಸಿಕೊಂಡೆ ಎಂದು ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ನನಗಿರೋ ಮಾಹಿತಿ ಪ್ರಕಾರ ಫೋನ್ ಕದ್ದಾಲಿಕೆ ಆಗುತ್ತಿದ್ದದ್ದು ನಿಜ. ಹೆಚ್.ಡಿ.ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಮಾಡಿದ್ರೆ, ಅವರನ್ನು ಹಿಡಿದುಕೊಂಡು ಹೋಗಲಿ ಬೇಡ ಎಂದು ಹೇಳಿದವರು ಯಾರು. ಅವರು ಮಾಡಬಾರದನ್ನು ಮಾಡಿ ದುಡ್ಡು ಹೊಡೆದಿದ್ದರೆ ಅವರನ್ನು ಹಿಡಿದುಕೊಂಡು ಹೋಗುತ್ತಾರೆ. ಅವರನ್ನು ಹಿಡಿಯಬಾರದು ಅಂತ ಕಾನೂನಿನಲ್ಲಿ ಏನಾದ್ರೂ ಇದೆಯಾ ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಮಾಡಿದ್ರು.
ನನ್ನ ಫೋನ್ ಕೂಡಾ ಕದ್ದಾಲಿಕೆ ಮಾಡಲಾಗಿತ್ತು: ಮಾಜಿ ಸಚಿವ ಶ್ರೀನಿವಾಸ್ ನಿನ್ನೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇವಲ ಒಕ್ಕಲಿಗರಷ್ಟೆ ಅಲ್ಲ ಎಲ್ಲಾ ಸಮುದಾಯದ ಜನ ಸೇರಿದ್ದರು. ಡಿಕೆಶಿ ಅಭಿಮಾನಿಗಳು, ಸಂಘ ಸಂಸ್ಥೆಗಳು ಎಲ್ಲರೂ ಸೇರಿದ್ದರು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಡಿಕೆಶಿ ಮೇಲೆ ಪ್ರೀತಿ ಇಲ್ಲ. ಪ್ರೀತಿ ಇದ್ದಿದ್ದರೆ ಅವರು ಸಮುದಾಯದ ಹೋರಾಟಕ್ಕೆ ಬರುತ್ತಿದ್ದರು. ಆದರೆ ಕುಮಾರಸ್ವಾಮಿ ಬರಬೇಕು ಅಂತ ಏನೂ ಇಲ್ಲ. ನಮಗೆಲ್ಲಾ ಡಿಕೆಶಿ ಮೇಲೆ ಪ್ರೀತಿ ಇತ್ತು, ಅದಕ್ಕೆ ಹೋಗಿದ್ದೆವು. ನಮ್ಮ ಸಮುದಾಯದ ಮುಖಂಡನ ಮೇಲೆ ಅನ್ಯಾಯ ಆದಾಗ ಪ್ರತಿಭಟಿಸುವುದು ನಮ್ಮ ಕರ್ತವ್ಯ ಎಂದರು.
ಕುಮಾರಸ್ವಾಮಿಗೆ ಆ ಭಾವನೆ ಇರಲಿಲ್ಲ. ಆ ಭಾವನೆ ಇದ್ದಿದ್ದರೆ ಖಂಡಿತಾ ಹೋರಾಟಕ್ಕೆ ಬರುತ್ತಿದ್ದರು. ಆಮಂತ್ರಣ ಕೊಟ್ಟು ಕರೆಯುವ ಕಾರ್ಯಕ್ರಮ ಇದಲ್ಲ. ಸಮುದಾಯದ ಕಾರ್ಯಕ್ರಮ ನಡೆಯುವಾಗ ಆಮಂತ್ರಣ ಕೊಡುವಂತದ್ದು ಎಲ್ಲೂ ಇಲ್ಲ. ಬಂದಿದ್ದ 25,000 ಜನಕ್ಕೂ ಆಮಂತ್ರಣ ಕೊಟ್ಟಿದ್ದಾರಾ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.