ತುಮಕೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾನು ಬಿಜೆಪಿ ಅಭ್ಯರ್ಥಿ ಆಗಿದ್ದರಿಂದ ನನ್ನ ದೂರವಾಣಿಯನ್ನು ಕೂಡ ಕದ್ದಾಲಿಕೆ ಮಾಡಲಾಗಿತ್ತು ಎಂದು ತುಮಕೂರು ಸಂಸದ ಜಿ.ಎಸ್.ಬಸವರಾಜು ಹೇಳಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ನನ್ನ ಫೋನ್ ಕೂಡಾ ಕದ್ದಾಲಿಕೆ ಆಗಿದೆ: ಸಂಸದ ಬಸವರಾಜು
ತುಮಕೂರು ಲೋಕಸಭೆ ಚುನಾವಣೆ ವೇಳೆ ನನ್ನ ಫೋನ್ ಕೂಡಾ ಕದ್ದಾಲಿಕೆ ಮಾಡಲಾಗಿತ್ತು ಎಂದು ತುಮಕೂರಿನಲ್ಲಿ ಸಂಸದ ಜಿ.ಎಸ್.ಬಸವರಾಜು ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಅಂದಿನ ಸಿಎಂ ಕುಮಾರಸ್ವಾಮಿ ಅವರ ತಂದೆ ಹೆಚ್.ಡಿ.ದೇವೇಗೌಡರ ಎದುರಾಳಿಯಾಗಿದ್ದರಿಂದ ಚುನಾವಣೆ ವೇಳೆ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ವಿಷಯ ಗೊತ್ತಾಗಿತ್ತು ಎಂದರು. ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಫೋನ್ ಕೂಡ ಕದ್ದಾಲಿಕೆ ಮಾಡಲಾಗಿತ್ತು. ಅಂದಮೇಲೆ ಇನ್ನು ನಮ್ಮನ್ನು ಬಿಡುತ್ತಾರೆಯೇ ಎಂದು ಬಸವರಾಜು ಮಾರ್ಮಿಕವಾಗಿ ನುಡಿದರು.
ಗುಬ್ಬಿ ವಿಧಾನಸಭಾ ಕ್ಷೇತ್ರ ಶಾಸಕ ಎಸ್.ಆರ್.ಶ್ರೀನಿವಾಸ್ಗೆ ತಲೆಕೆಟ್ಟಿದೆ. ಅವರಷ್ಟು ಕೀಳುಮಟ್ಟಕ್ಕೆ ನಾನು ಇಳಿದು ಮಾತನಾಡುವುದಿಲ್ಲ. ಅವರ ಅಪ್ಪನಿಗೆ ಗೊತ್ತು ನಾನು ಏನು ಸಹಾಯ ಮಾಡಿದ್ದೇನೆ ಅಂತ. ಆ ಸಂದರ್ಭದಲ್ಲಿ ಶ್ರೀನಿವಾಸ್ ಚೆಡ್ಡಿ ಹಾಕಿಕೊಂಡು ತಿರುಗುತ್ತಿದ್ದ. ಆತ ನನ್ನ ಮುಂದೆ ಬಂದು ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಖಜಾನೆಯನ್ನು ಖಾಲಿ ಮಾಡಿ ಹೋಗಲಾಗಿತ್ತು. ಯಡಿಯೂರಪ್ಪ ಸಿಎಂ ಆದ ನಂತರ ಖಜಾನೆಯಲ್ಲಿ ಸಮತೋಲನ ಕಾಪಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.