ತುಮಕೂರು :ಕೋವಿಡ್ ಸಂಭಾವ್ಯ ಮೂರನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ಮತ್ತು ಒಟ್ಟು 10 ತಾಲೂಕು ಆಸ್ಪತ್ರೆಗಳಲ್ಲಿ ಮಕ್ಕಳಿಗೋಸ್ಕರ 547 ಹಾಸಿಗೆ, 116 ಎನ್ಐಸಿಯು, 53 ಪಿಐಸಿಯು ಮತ್ತು 20 ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್. ನಟರಾಜ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೊರೊನಾ 3ನೇ ಅಲೆಯ ಸಿದ್ದತೆ ಕುರಿತ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಪ್ರತಿ ತಾಲೂಕುಗಳಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪರಿಣಿತ ಮಕ್ಕಳ ತಜ್ಞರನ್ನು ಗುರುತಿಸಲಾಗಿದೆ. ಸರ್ಕಾರದ ಮುಖ್ಯಮಂತ್ರಿ ಬಾಲಸೇವಾ ಯೋಜನೆ ಹಾಗೂ ಬಾಲಹಿತೈಷಿ ಯೋಜನೆಯನ್ನು ಸಮರ್ಪಕ ಅನುಷ್ಠಾನ ಮಾಡಲಾಗಿದೆ. ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ 1 ಮತ್ತು 2 ನೇ ಅಲೆಯಲ್ಲಿ ಕೋವಿಡ್‌ನಿಂದ ಮರಣ ಹೊಂದಿದ ಓರ್ವ ಅಂಗನವಾಡಿ ಕಾರ್ಯಕರ್ತೆಗೆ ₹30 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 4109 ಅಂಗನವಾಡಿ ಕೇಂದ್ರಗಳಿದ್ದು, 7396 ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರಿದ್ದಾರೆ. ಇವರಲ್ಲಿ 7080 ಮೊದಲ ಲಸಿಕೆ ಹಾಗೂ 6601 ಕಾರ್ಯಕರ್ತೆಯರು 2ನೇ ಡೋಸ್ ಲಸಿಕೆ ಪಡೆದಿದ್ದಾರೆ. 6 ವರ್ಷದೊಳಗಿನ 14,6,079 ಹಾಗೂ 0-18 ವರ್ಷದೊಳಗಿನ 48,2,651ಮಕ್ಕಳು, 16,352 ಗರ್ಭಿಣಿಯರು, 15,642 ಬಾಣಂತಿಯರು, 12 ಕಿಶೋರಿಯರು, 176 ತೀವ್ರ ಅಪೌಷ್ಠಿಕ ಮಕ್ಕಳಿದ್ದಾರೆ ಎಂದರು.
ಹತ್ತು ಸಾವಿರ ಮಕ್ಕಳಿಗೆ ಕೋವಿಡ್ :ಮೊದಲನೆ ಅಲೆಯಲ್ಲಿ 2382 ಮಕ್ಕಳಿಗೆ, ಅದಾದ ಬಳಿಕ 2021ರ ಏಪ್ರಿಲ್ನವರೆಗೆ 2386 ಹಾಗೂ 2021ರ ಮೇವರೆಗೆ 5273 ಸೇರಿ ಒಟ್ಟು ಎರಡನೇ ಅಲೆಯಲ್ಲಿ 7659 ಹಾಗೂ ಕೋವಿಡ್ ಪ್ರಾರಂಭವಾದಾಗಿನಿಂದ ಈವರೆಗೆ ಒಟ್ಟು 10041 ಮಕ್ಕಳಿಗೆ ಕೋವಿಡ್ ದೃಢವಾಗಿದೆ. ಆದರೆ, ಯಾವುದೇ ಮಗು ಸಾವನ್ನಪ್ಪಿಲ್ಲ. ಬಹುತೇಕ ಎಲ್ಲಾ ಮಕ್ಕಳು ಚೇತರಿಸಿಕೊಂಡಿದ್ದಾರೆ. ಹಾಗೇ ಯಾವುದೇ ಮಗುವಿನಲ್ಲೂ ಬ್ಲಾಕ್ ಫಂಗಸ್ ಪತ್ತೆಯಾಗಿಲ್ಲ ಎಂದು ಹೇಳಿದರು.