ತುಮಕೂರು:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನಪ್ರಿಯತೆ ಇದೆ ಎಂದು ಜೆಡಿಎಸ್ ಮತ್ತು ಬಿಜೆಪಿಯವರು ಆತಂಕದಲ್ಲಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ತುಮಕೂರಿನಲ್ಲಿ ಮಾತನಾಡಿದ ಅವರು, ಈ ಆತಂಕದಿಂದ ಜೆಡಿಎಸ್ ಮತ್ತು ಬಿಜೆಪಿಯವರು ಮೈತ್ರಿ ಮಾಡಿಕೊಳ್ಳಬಹುದು ನನಗೆ ಗೊತ್ತಿಲ್ಲ. ಮಾಡಿಕೊಂಡರು ನಮಗೆ ಚಿಂತೆ ಇಲ್ಲ. ಬಿಜೆಪಿ ಸರ್ಕಾರದ ಆಡಳಿತದಿಂದ ಜನರ ಜೀವನ ದುಸ್ತರ ಆಗಿದ್ದು, ಉದ್ಯೋಗ ಕೊಡುತ್ತೀವಿ ಎಂದು ಹೇಳಿ ಕೋಟ್ಯಂತರ ಉದ್ಯೋಗ ಕಿತ್ತುಕೊಂಡಿದ್ದಾರೆ. ಬಡವರ ಮೇಲೆ ಟ್ಯಾಕ್ಸ್ ಹಾಕಿ ಶ್ರೀಮಂತರನ್ನು ಸಾಕುವಂತಹ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಎಂದು ಆರೋಪಿಸಿದರು.
ವಿಧಾನಸಭಾ ಚುನಾವಣಾ ಫಲಿತಾಂಶ ಬಂದು ನಾಲ್ಕು ತಿಂಗಳಾಗಿದೆ. ವಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಅವರಿಂದ ಇನ್ನೂ ಸಾಧ್ಯವಾಗಿಲ್ಲ. ಇದು ನಾಲಾಯಕತನ, ಅವರ ಆಂತರಿಕ ಕಚ್ಚಾಟದಿಂದ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಂಡಿಲ್ಲ. ಇವತ್ತು ತುಮಕೂರು ಜಿಲ್ಲೆಗೆ ಬಂದಿದ್ದೇನೆ. ನಾಡಕಚೇರಿ, ತಾಲೂಕು ಕಚೇರಿ, ಸಬ್ ರಿಜಿಸ್ಟರ್ ಕಚೇರಿ ಪರಿಶೀಲನೆ ನಡೆಸಿದ್ದೇನೆ. ಜನರ ಸಮಸ್ಯೆ ಆಲಿಸಿದ್ದೇನೆ, ಅಧಿಕಾರಿಗಳ ಕೆಲಸ ಪರಿಶೀಲಿಸಿದ್ದೇನೆ. ನನ್ನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಕರೆದಿದ್ದೇನೆ ಎಂದು ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಯಿದೆ. ಅಂತಹ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದೇನೆ. ಇವತ್ತು ಸಂಜೆವರೆಗೂ ಪರಿಶೀಲನೆ ನಡೆಸುತ್ತೇನೆ. ಜನಪರ ಸೇವೆ ಕೊಡಬೇಕು ಅನ್ನೋದು ನಮ್ಮ ಸರ್ಕಾರದ ಉದ್ದೇಶ ಎಂದ ಅವರು, ಗುಬ್ಬಿ ತಾಲೂಕುನಲ್ಲಿ ನಕಲಿ ಖಾತೆ ಪ್ರಕರಣಗಳ ಬಗ್ಗೆ ಮಾತನಾಡಿ, ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ. ಲೋಕಾಯುಕ್ತ ತನಿಖಾ ವರದಿ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.