ತುಮಕೂರು: ಯುವ ಸಮೂಹದ ಆಸಕ್ತಿದಾಯಕ ಕ್ಷೇತ್ರವಾಗಿರುವ ಕ್ರೀಡಾ ಕ್ಷೇತ್ರದ ಮೇಲೆ ಲಾಕ್ಡೌನ್ ವ್ಯತಿರಿಕ್ತ ಪರಿಣಾಮ ಬೀರಿದ್ದು, ಜಿಲ್ಲೆಯಲ್ಲಿ ಈವರೆಗೂ ಅದರ ಚಟುವಟಿಕೆಗಳು ಇನ್ನೂ ಆರಂಭಗೊಂಡಿಲ್ಲ.
ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ವಿವಿಧ ಅಕಾಡೆಮಿಗಳು ಯಾವುದೇ ತರಬೇತಿಗಳನ್ನು ಆಯೋಜಿಸದೇ ತಟಸ್ಥವಾಗಿವೆ. ಪ್ರತಿ ವರ್ಷ ಕನಿಷ್ಠ 10 ಸಾವಿರ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ, ಅವರ್ಯಾರಿಗೂ ಈ ಬಾರಿ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಅವಕಾಶವೇ ಇಲ್ಲದಂತಾಗಿದೆ.
ಆಗಸ್ಟ್ ನಂತರ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿವಿಧ ಕ್ರೀಡಾ ಚಟುವಟಿಕೆ ಕಾರ್ಯಕ್ರಮಗಳು ಆರಂಭವಾಗುತ್ತವೆ ಎನ್ನಲಾಗಿತ್ತು. 2020 ಪೂರ್ಣಗೊಳ್ಳಲು ತಿಂಗಳು ಮಾತ್ರ ಬಾಕಿ ಇದೆ. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಕ್ರೀಡಾ ಚಟುವಟಿಕೆಗಳಿಗೆ ಅನುದಾನ ನಿಗದಿಪಡಿಸುವ ಕ್ರಿಯಾಯೋಜನೆಗೆ ಅನುಮೋದನೆ ಸಿಕ್ಕಿಲ್ಲ.
ಪ್ರತಿ ಆಗಸ್ಟ್ನಲ್ಲಿ ದಸರಾ ಕ್ರೀಡಾಕೂಟ, ಯುವಜನಮೇಳ ಸೇರಿದಂತೆ ತಾಲೂಕು ಮಟ್ಟದಲ್ಲಿಯೂ ಕ್ರೀಡಾಕೂಟ ಆಯೋಜನೆಗೊಳ್ಳುತ್ತದೆ. ಎಲ್ಲ ತಾಲೂಕಿನಲ್ಲೂ 800 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದರು. ಆದರೆ, ಈ ಬಾರಿ ಅವಕಾಶ ಸಿಗದಂತಾಗಿದೆ.
ಇಲಾಖೆಯಿಂದ ನಡೆಸುತ್ತಿದ್ದ ಜಿಮ್ ಕೂಡ ಸಂಪೂರ್ಣ ಬಂದ್ ಆಗಿತ್ತು. ಇದು ದೇಹದಾರ್ಢ್ಯ ಪಟುಗಳಿಗೆ ತೀವ್ರ ನಿರಾಸೆ ಉಂಟು ಮಾಡಿತು. ಹಾಗೆಯೇ ಜೂನ್ನಲ್ಲಿ ಕ್ರೀಡಾ ಶಾಲೆಗಳಿಗೆ ಕ್ರೀಡಾಪಟುಗಳ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಈ ಬಾರಿ ಯಾವುದೇ ಪ್ರಕ್ರಿಯೆಗಳು ಜರುಗಿಲ್ಲ. ಸರ್ಕಾರದ ಆದೇಶಕ್ಕಾಗಿ ಇಲಾಖೆಯ ಅಧಿಕಾರಿಗಳು ಕಾಯುತ್ತಿದ್ದಾರೆ.