ತುಮಕೂರು: ಬಹುಪಾಲು ಬರಪೀಡಿತ ತಾಲೂಕು ಎಂದೇ ಪರಿಗಣಿಸಲ್ಪಟ್ಟಿರುವ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಈ ಬಾರಿ ಏಕಾಏಕಿ ಭರ್ಜರಿ ಮಳೆಯಾಗುತ್ತಿದೆ. ಈ ನಡುವೆ ಹಲವು ವರ್ಷಗಳಿಂದ ನೀರನ್ನೇ ಕಾಣದಂತಹ ಕೆರೆಗಳು ಭರ್ತಿಯಾಗಿವೆ.
ಇನ್ನೊಂದೆಡೆ ಹಲವು ವರ್ಷಗಳಿಂದ ದುರಸ್ತಿ ಕಾಣದಂತಹ ಕೆರೆ ಏರಿಗಳು ಏಕಾಏಕಿ ಭರ್ತಿಯಾಗುತ್ತಿರುವುದರಿಂದ ಅಲ್ಲಲ್ಲಿ ಕುಸಿಯತೊಡಗಿವೆ. ಅದೇ ರೀತಿಯಾದ ಘಟನೆಗೆ ಸಾಕ್ಷಿಯಾಗಿರೋದು ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮದಲ್ಲಿ ದೊಡ್ಡದಾದ ಕೆರೆ. ಎರಡು ದಿನಗಳಿಂದ ನಿರಂತರವಾಗಿ ಪಳವಳ್ಳಿ ಗ್ರಾಮದ ಸುತ್ತಮುತ್ತ ಸುರಿದ ಮಳೆಯಿಂದಾಗಿ ಈ ಕೆರೆಯಲ್ಲಿ ನೀರು ತುಂಬಿದೆ. ಇನ್ನೊಂದೆಡೆ ಕೆರೆ ಏರಿ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.