ತುಮಕೂರು:ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ಈಡಿ ವಿಚಾರಣೆ ನಡೆಯುತ್ತಿದೆ. ಈ ನಡುವೆ, ಇಡಿ ನೋಟಿಸ್ ನೀಡಿದ ಹಿನ್ನೆಲೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮತ್ತು ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ದೆಹಲಿಯಲ್ಲಿ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದು, ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ಯಾವ ರೀತಿಯ ವಿಚಾರಣೆ ಎಂಬುದನ್ನು ನೋಟಿಸ್ನಲ್ಲಿ ಸ್ಟಷ್ಟವಾಗಿ ತಿಳಿಸಿಲ್ಲ ಎಂದು ಈಗಾಗಲೇ ಕೆ.ಎನ್. ರಾಜಣ್ಣ ಸ್ಪಷ್ಟಪಡಿಸಿದ್ದರು. ಡಿ.ಕೆ.ಶಿವಕುಮಾರ್ ಪ್ರಕರಣ ಸಂಬಂಧ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನೊಂದೆಡೆ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷಾ ಶುಗರ್ಸ್ಗೆ 300 ಕೋಟಿ ರೂ. ಹಣವನ್ನು ಅಪೆಕ್ಸ್ ಬ್ಯಾಂಕಿನಿಂದ ಸಾಲ ನೀಡಲಾಗಿದ್ದು, ಈ ಕುರಿತಂತೆ ಮಾಹಿತಿ ಪಡೆಯಲು ಇಡಿ ನೋಟಿಸ್ ನೀಡಿರಬಹುದು ಎಂದು ಕೆ.ಎನ್. ರಾಜಣ್ಣ ಶಂಕೆ ವ್ಯಕ್ತಪಡಿಸಿದ್ದರು.