ಕರ್ನಾಟಕ

karnataka

By

Published : May 4, 2019, 11:48 PM IST

ETV Bharat / state

ಮರಳು ಲೂಟಿಕೋರರ ಕೈಯಲ್ಲಿ ನಲುಗುತ್ತಿದೆ ಜಯಮಂಗಲಿ ನದಿ

ತುಮಕೂರು ಬಳಿ ಎಗ್ಗಿಲ್ಲದೆ ನಡೆಯುತ್ತಿದೆ ಮರಳು ಗಣಿಗಾರಿಕೆ. ಇದರ ಬಗ್ಗೆ ತಾಲೂಕು ಆಡಳಿತ ಮಂಡಳಿ ಈಗ ಎಚ್ಚೆತ್ತಿಕೊಂಡರೂ ಲೂಟಿ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಿದೆ ಅಧಿಕಾರಿಗಳ ಸ್ಥಿತಿ.

ಜಯಮಂಗಲಿ ನದಿ

ತುಮಕೂರು:ನದಿಗಳು ಜನರ ಜೀವನಾಡಿ. ಅದರಲ್ಲೂ ತುಮಕೂರು ಜಿಲ್ಲೆ ಬಯಲು ಸೀಮೆಯಂತಹ ಪ್ರದೇಶದಲ್ಲಿ ನದಿಗಳು ಅತಿ ಮಹತ್ವ ಪಡೆದುಕೊಳ್ಳುತ್ತವೆ. ಆದರೆ ಅಂತಹ ನದಿಗಳನ್ನು ಅಕ್ರಮವಾಗಿ ಮರಳು ಲೂಟಿಕೋರರು ಹಾಳುಗೆಡವಿದ್ದಾರೆ. ಲೂಟಿಕೋರರಿಗೆ ಕಡಿವಾಣ ಇಲ್ಲದಂತಾಗಿದ್ದು, ನದಿಯೊಂದರ ಸ್ಥಿತಿ ಶೋಚನೀಯವಾಗಿದೆ.

ಬರಿದಾಗಿರುವ ಜಯಮಂಗಲಿ ನದಿ

ದೇವರಾಯನ ದುರ್ಗ ಅರಣ್ಯ ಪ್ರದೇಶದಲ್ಲಿ ಹುಟ್ಟಿ ಆಂಧ್ರ ಪ್ರದೇಶದವರೆಗೂ ಹರಿಯುವ ಜಯಮಂಗಲಿ ನದಿ ದಶಕಗಳ ಹಿಂದೆ ಸಮೃದ್ಧವಾಗಿತ್ತು. ಬರಬರುತ್ತಾ ಜಯಮಂಗಲಿ ನದಿಯಲ್ಲಿ ಯಥೇಚ್ಚವಾಗಿ ಇದ್ದ ಮರಳಿನ ಮೇಲೆ ಮನುಷ್ಯನ ಕಣ್ಣು ಬಿದ್ದು ಈಗ ಅಲ್ಲಿ ಎಗ್ಗಿಲ್ಲದೆ ಮರಳನ್ನು ದಂಧೆಕೋರರು ಲೂಟಿ ಹೊಡೆಯಲಾರಂಭಿಸಿದ್ದಾರೆ. ಹೀಗಾಗಿ ನದಿಯಲ್ಲಿ ಬೃಹತ್ ಗುಂಡಿಗಳು ತೆರೆದುಕೊಂಡು, ಮಳೆಗಾಲದಲ್ಲಿ ನದಿ ಭಾಗಕ್ಕೆ ಹರಿದು ಬರುವಂತಹ ನೀರು ಮುಂದೆ ಸರಾಗವಾಗಿ ಸಾಗದೆ ಬೃಹತ್ ಗುಂಡಿಗಳಲ್ಲಿ ಸಂಗ್ರಹವಾಗಿ ಅಲ್ಲೇ ನಿಲ್ಲುತ್ತದೆ. ಅಲ್ಲದೆ ನೀರು ಇಂಗುವಿಕೆಯ ಪ್ರಮುಖ ಅಂಶಗಳಾದ ನದಿಯ ಎರಡು ಬದಿಯಲ್ಲಿ ಗಿಡಮರಗಳು ಇಲ್ಲದೆ, ಹುಲ್ಲು ಬೆಳೆಯದೆ ನದಿ ಬರಡು ಭೂಮಿಯಂತಾಗಿದೆ.

ವರ್ಷಕ್ಕೆ ಸಾವಿರಾರು ಲೋಡು ಮರಳನ್ನು ಲೂಟಿಕೋರರು ನದಿಯಿಂದ ತೆಗೆಯುತ್ತಾರೆ. ಕಳೆದ ಒಂದು ದಶಕದಿಂದ ಮರಳು ಲೂಟಿಕೋರರ ಆರ್ಭಟಕ್ಕೆ ಜಯಮಂಗಲಿ ನದಿ ನಲುಗಿ ಹೋಗಿದೆ. ಕಳೆದ ಎರಡು ವರ್ಷಗಳಿಂದ ಎಚ್ಚೆತ್ತುಕೊಂಡಿರುವ ತಾಲೂಕು ಆಡಳಿತ ಮಂಡಳಿಯ ಸ್ಥಿತಿ ಲೂಟಿ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಿದೆ. ಜಯಮಂಗಲಿ ನದಿಯ ಶೇ. 40ರಷ್ಟು ಭಾಗದಲ್ಲಿ ಇದ್ದ ಮರಳನ್ನು ಲೂಟಿ ಮಾಡಲಾಗಿದೆ. ಮಧುಗಿರಿ ಹಾಗೂ ಕೊರಟಗೆರೆ ತಾಲೂಕಿನ ವ್ಯಾಪ್ತಿಯಲ್ಲಿ ರೈತರ ಹೊಲಗಳ ಮೂಲಕ ಇಂದಿಗೂ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಆದ್ರೆ ಇದಕ್ಕೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗದೇ ಇರುವುದು ದುರಂತವಾಗಿದೆ.

For All Latest Updates

TAGGED:

ABOUT THE AUTHOR

...view details