ತುಮಕೂರು:ಹಣವನ್ನು ಕೊಟ್ಟು ಚುನಾವಣೆಯಲ್ಲಿ ಗೆಲ್ಲಬಹುದು ಅಂತಾ ಬಿಜೆಪಿಯವರು ಉದ್ದಟತನ ತೋರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಶಿರಾ ತಾಲೂಕಿನ ಶಿರಾದ ಸೋರೆಕುಂಟೆ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇವತ್ತಿನ ಈ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಪಕ್ಷದ ನಡವಳಿಕೆಯನ್ನು ನೋಡುತ್ತಿದ್ದೇವೆ. ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುವ ಯುವಕರಿಗೆ ಚುನಾವಣಾ ಪ್ರಚಾರದ ನೇತೃತ್ವ ಕೊಟ್ಟಿದ್ದಾರೆ.
ಬೇರೆ ಜಿಲ್ಲೆಯಿಂದ ಬಂದಿರುವ ಯುವಕರಿಗೆ ಈ ಜಿಲ್ಲೆಯ, ತಾಲೂಕಿನ ಜನತೆಯ ಸ್ವಾಭಿಮಾನ ಅವರಿಗೆ ಗೊತ್ತಿಲ್ಲ. ಇದಕ್ಕೆ ತಾಲೂಕಿನ ಜನ ಇತಿಶ್ರೀ ಇಡುತ್ತೀರಾ ಅಂತಾ ನಂಬಿದ್ದೇನೆ ಎಂದರು. ರಾಜ್ಯದಲ್ಲಿ ಯಾವುದಾದರೂ ಒಂದು ಪಕ್ಷ ರೈತರ, ಹಿಂದುಳಿದವರ, ದೀನದಲಿತರ ಪರವಾಗಿ ಉತ್ತಮವಾದ ಕೆಲಸ ಮಾಡಿದೆ ಅಂದರೆ ಅದು ಜೆಡಿಎಸ್ ಮಾತ್ರ ಎಂದರು.
ಗ್ರಾಮಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾಪಂಚಾಯತ್ ಅಧಿಕಾರ ಎಲ್ಲಾ ಸಮಾಜದವರಿಗೂ ಸಿಗಲು ದೇವೇಗೌಡರು ಶ್ರಮಿಸಿದ್ದಾರೆ. ಬಗರ್ ಹುಕುಂ ಸಾಗುವಳಿ ಚೀಟಿಯನ್ನು 17,000 ಸಾವಿರ ಜನಕ್ಕೆ ನೀಡಿರೋದು ದಾಖಲೆಯಾಗಿದೆ ಎಂದರು.