ರೋಗಿಗಳಿಗೆ ಡಿ ಗ್ರೂಪ್ ನೌಕರನಿಂದ ಚಿಕಿತ್ಸೆ ಆರೋಪ ತುಮಕೂರು:ಜಿಲ್ಲೆಯ ಪಾವಗಡ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರೊಬ್ಬ, ವೈದ್ಯರಂತೆ ಚಿಕಿತ್ಸೆ ನೀಡುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆಸ್ಪತ್ರೆಗೆ ದಾಖಲಾಗುವ ಕೀಲುಮೂಳೆ ನೋವಿಗೆ ಸಂಬಂಧಿಸಿದ ರೋಗಿಗಳಿಗೆ ಡಿ ಗ್ರೂಪ್ ನೌಕರ ಮದಕರಿ ನಾಯಕ ಎಂಬಾತ ಚಿಕಿತ್ಸೆ ನೀಡುತ್ತಿರುವುದನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳು ಈತನ ಬಳಿ ಚಿಕಿತ್ಸೆ ಪಡೆಯಲು ನಿರಕಾರಿಸಿದಾಗ, ರೋಗಿಗಳಿಗೆ ತಾನೇ ಡಾಕ್ಟರ್, ಟ್ರೀಟ್ಮೆಂಟ್ ತಗೊಳೋದಾದ್ರೆ ತಗೊಳ್ಳಿ. ಇಲ್ಲಾ ಅಂದ್ರೆ ಹೋಗಿ ಎಂದು ಗದರಿಸುತ್ತಾನೆ ಎಂದು ರೋಗಿಯೊಬ್ಬರು ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತೀರೋ ಆರ್ಥೋಪೆಡಿಕ್ ವೈದ್ಯರೊಬ್ಬರು ದೀರ್ಘಾವಧಿ ರಜೆ ಪಡೆದಿದ್ದಾರೆ. ವೈದ್ಯರ ಕೊರತೆಯಿಂದಾಗಿ ಡಿ ಗ್ರೂಪ್ ನೌಕರನಿಂದಲೇ ರೋಗಿಗಳು ವಿಧಿಯಿಲ್ಲದೆ ಚಿಕಿತ್ಸೆ ಪಡೆಯುವಂತಾಗಿದೆ. ಸದ್ಯ ನೌಕರ ರೋಗಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಕುರಿತಂತೆ 'ಈಟಿವಿ ಭಾರತ'ಕ್ಕೆ ಸ್ಪಷ್ಟನೆ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಂಜುನಾಥ, ಈ ಕುರಿತಂತೆ ಈಗಾಗಲೇ ಡಿ ಗ್ರೂಪ್ ನೌಕರನಿಂದ ಸ್ಪಷ್ಟನೆ ಕೇಳಲಾಗಿದೆ. ಆತ ಕೆಲವೊಂದು ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದರೆ, ಅದಕ್ಕೆ ಯಾವುದೇ ಆಕ್ಷೇಪ ಇರೋದಿಲ್ಲ. ಆದರೆ ಸಂಪೂರ್ಣ ಚಿಕಿತ್ಸೆಯ ವಿಧಾನವನ್ನು ಆತ ಮಾಡಲು ಪ್ರಯತ್ನಿಸಿರುವುದು ಸಾಬೀತಾದರೆ ಆತನ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರನಿಗೆ ಗಂಭೀರ ಗಾಯ:ಮತ್ತೊಂದೆಡೆ ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಚಲಿಸುತ್ತಿದ್ದ ಬೈಕ್ ನಿಂದ ಬಿದ್ದ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಹನುಮಂತಪುರದಲ್ಲಿ ನಡೆದಿದೆ. ಹನುಮಂತಪುರ ಗ್ರಾಮದ ವಾಸಿ ಕೃಷ್ಣ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ. ಮಿಡಿಗೇಶಿಯಿಂದ ಹನುಮಂತಪುರಕ್ಕೆ ತೆರಳುವಾಗ ಈ ಘಟನೆ ನಡೆದಿದೆ. ಬೈಕ್ನಲ್ಲಿ ಹೋಗುವಾಗ ದಿಢೀರನೆ ಕರಡಿ ರಸ್ತೆಗೆ ಅಡ್ಡಲಾಗಿ ಬಂದಿದೆ.
ಕರಡಿ ಕಂಡು ಗಾಬರಿಯಾದ ಕೃಷ್ಣ, ಕರಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಆಯತಪ್ಪಿ ಬೈಕ್ನಿಂದ ಬಿದ್ದಿದ್ದಾರೆ. ನಂತರ ಸ್ಥಳೀಯರ ಸಹಾಯದಿಂದ ಬೈಕ್ ಸವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಧುಗಿರಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ತಿಳಿದ ಅರಣ್ಯಾಧಿಕಾರಿ ಮುತ್ತುರಾಜ್ ಆಸ್ಪತ್ರೆಗೆ ಭೇಟಿ ನೀಡಿ ಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನು ಇಲಾಖೆ ವತಿಯಿಂದ ಭರಿಸಲಾಗುವುದು ಮತ್ತು ಸೂಕ್ತ ಪರಿಹಾರವನ್ನು ಕೂಡ ಕೊಡಲಾಗುವುದು ಎಂಬ ಭರವಸೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಯಲು ಪ್ರದೇಶಗಳಾದ ಕೊರಟಗೆರೆ, ಮಧುಗಿರಿ, ಪಾವಗಡ ತಾಲೂಕುಗಳ ವ್ಯಾಪ್ತಿಯಲ್ಲಿ ಕರಡಿಗಳ ಸಂಖ್ಯೆ ಹೆಚ್ಚುತ್ತಿದೆ. ಹೊಲ ಗದ್ದೆಗಳಲ್ಲಿ ಹಾಗೂ ತೋಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಕರಡಿಗಳು ಈಗ ಜನವಸತಿ ಪ್ರದೇಶಗಳತ್ತ ಲಗ್ಗೆ ಇಡುತ್ತಿವೆ ಹಾಗೂ ರಸ್ತೆಗಳ ಬಳಿ ಕಾಣಿಸಿಕೊಂಡು ವಾಹನ ಸವಾರರಿಗೆ ಆತಂಕವನ್ನು ಸೃಷ್ಟಿಸುತ್ತಿವೆ.
ಇದನ್ನೂ ಓದಿ:ಪೂರ್ಣವಾಗದ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ: ಗುಡ್ಡ ಕುಸಿತ ಆತಂಕದಲ್ಲಿ ವಾಹನ ಸವಾರರು