ತುಮಕೂರು:ಜಿಲ್ಲೆಯ ರೈತರು ಮತ್ತು ವರ್ತಕರ ಆರೋಗ್ಯದ ದೃಷ್ಟಿಯಿಂದ ಜಿಲ್ಲೆಯಲ್ಲಿ ಉತ್ಪಾದನೆಯಾಗೋ ಕೊಬ್ಬರಿ, ಹುಣಸೆಹಣ್ಣು ಮಾರಾಟಕ್ಕೆ ಹೊರ ರಾಜ್ಯಗಳಿಗೆ ಹೋಗದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಹೊರ ರಾಜ್ಯಗಳಿಗೆ ಹುಣಸೆಹಣ್ಣು, ಕೊಬ್ಬರಿ ಮಾರಲು ಹೋಗಬೇಡಿ: ಸಚಿವ ಮಾಧುಸ್ವಾಮಿ ಸೂಚನೆ - ಹುಣಸೆ,ಕೊಬ್ಬರಿ ಮಾರಾಟ
ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಸೇರಿದಂತೆ ನೆರೆ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹೊರ ರಾಜ್ಯಗಳಿಗೆ ಕೊಬ್ಬರಿ, ಹುಣಸೆಹಣ್ಣು ಮಾರಾಟಕ್ಕೆ ಹೋಗಬೇಡಿ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ, ತುಮಕೂರು ಜಿಲ್ಲೆಯಿಂದ ರಾಜ್ಯದ ವ್ಯಾಪ್ತಿಯಲ್ಲಿ ಮಾತ್ರ ಹುಣಸೆಹಣ್ಣು ಮತ್ತು ಕೊಬ್ಬರಿಯ ಮಾರಾಟಕ್ಕೆ ಅವಕಾಶ. ಹೊರ ರಾಜ್ಯಗಳಿಗೆ ಮಾರಾಟ ಮಾಡಲು ಅವಕಾಶವಿರುವುದಿಲ್ಲ. ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಸೇರಿದಂತೆ ನೆರೆ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಕೊಬ್ಬರಿ ಮತ್ತು ಹುಣಸೆಹಣ್ಣನ್ನ ಜಿಲ್ಲೆಯಿಂದ ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ. ಜಿಲ್ಲೆಯ ಬಯಲುಸೀಮೆ ಭಾಗವಾದ ಪಾವಗಡ, ಮಧುಗಿರಿ, ಕೊರಟಗೆರೆಯಲ್ಲಿ ಹುಣಸೆಹಣ್ಣು ಯಥೇಚ್ಚವಾಗಿ ದೊರೆಯಲಿದೆ.
ಪಾವಗಡ ಮತ್ತು ಮಧುಗಿರಿ ತಾಲೂಕಿನ ರೈತರು ಬಹುತೇಕ ನೆರೆಯ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಮಾರುಕಟ್ಟೆಯಲ್ಲಿ ಹುಣಸೆಹಣ್ಣು ಮಾರಾಟಕ್ಕೆ ತೆರಳುತ್ತಾರೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಆಂಧ್ರ ಪ್ರದೇಶಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ಅದೇ ರೀತಿ ತಿಪಟೂರಿನ ಕೊಬ್ಬರಿ ಮಾರುಕಟ್ಟೆಯಿಂದ ಮುಂಬೈಗೆ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬರಿ ಸರಬರಾಜು ಆಗುತ್ತದೆ. ಆದ್ರೆ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳಿದ್ದು, ವರ್ತಕರು ಮುಂಬೈ ಮಾರುಕಟ್ಟೆಗೆ ಕೊಬ್ಬರಿ ತೆಗೆದುಕೊಂಡು ಹೋಗಬಾರದು. ಅದರ ಬದಲು ಕರ್ನಾಟಕದಲ್ಲಿಯೇ ವ್ಯಾಪಾರ ವಹಿವಾಟು ನಡೆಸಿ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.