ತುಮಕೂರು: ನಗರದ ಕೇಂದ್ರ ಗ್ರಂಥಾಲಯಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಪಾಲಿಗೆ ವರದಾನವಾಗಿದೆ.
ಅತ್ಯಂತ ಸ್ಮಾರ್ಟ್ ಈ ಡಿಜಿಟಲ್ ಲೈಬ್ರರಿ: ಜ್ಞಾನಾಸಕ್ತರ ಪಾಲಿಗೆ ವರದಾನ!
ತುಮಕೂರಿನ ಹೃದಯ ಭಾಗದಲ್ಲಿ ಇ ಡಿಜಿಟಲ್ ಗ್ರಂಥಾಲಯ ಆರಂಭವಾಗಿದ್ದು, ವಿದ್ಯಾರ್ಥಿಗಳು ಹಾಗೂ ಉದ್ಯೋಕಾಂಕ್ಷಿಗಳ ಪಾಲಿಗೆ ಜ್ಞಾನ ಕಣಜವಾಗಿ ಹೊರಹೊಮ್ಮಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಕೇಂದ್ರ ಗ್ರಂಥಾಲಯ ಸಮುಚ್ಚಯದಲ್ಲಿ ಡಿಜಿಟಲ್ ಗ್ರಂಥಾಲಯ ತೆರೆಯಲಾಗಿದೆ. ಏಕಕಾಲದಲ್ಲಿ 25 ಮಂದಿ ಈ ಡಿಜಿಟಲ್ ಗ್ರಂಥಾಲಯದ ಮೂಲಕ ತಮಗೆ ಬೇಕಾದ ಮಾಹಿತಿ ಪಡೆಯಬಹುದಾಗಿದೆ. ಇದಕ್ಕೆ ಪೂರಕವಾಗಿ 25 ಕಂಪ್ಯೂಟರ್ಗಳನ್ನು ಅಳವಡಿಸಲಾಗಿದ್ದು, ನಿರಂತರ ಇಂಟರ್ನೆಟ್ ಸೌಲಭ್ಯ, ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಸಂಶೋಧನಾ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ನಿತ್ಯ ಡಿಜಿಟಲ್ ಲೈಬ್ರರಿಯ ಅನುಕೂಲ ಪಡೆಯುತ್ತಿದ್ದಾರೆ.
ಡಿಜಿಟಲ್ ಲೈಬ್ರರಿಯ ವೆಬ್ಸೈಟ್ನಲ್ಲಿ 5000ಕ್ಕೂ ಹೆಚ್ಚು ಇ-ಬುಕ್ಗಳು, 85ಕ್ಕೂ ಹೆಚ್ಚು ದಿನಪತ್ರಿಕೆಗಳು, ಸುಮಾರು 14 ಮಿಲಿಯನ್ ಸಂಶೋಧನಾ ಪ್ರಬಂಧಗಳು ಲಭ್ಯವಿವೆ. ಡಿಜಿಟಲ್ ಲೈಬ್ರರಿಗೆ ಖುದ್ದು ಭೇಟಿ ನೀಡುವ ಇಲ್ಲವೇ, ಡಿಜಿಟಲ್ ಲೈಬ್ರರಿಯ ವೆಬ್ಸೆಟ್ಗೆ ಭೇಟಿ ನೀಡುವ ಮೂಲಕವೂ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದಾಗಿದೆ.