ತುಮಕೂರು: ಕೊರೊನಾ ಮುಂಚೂಣಿ ಕಾರ್ಯಕರ್ತರೆಂದು ಗುರುತಿಸಲಾದ ಚಿತಾಗಾರ/ಸ್ಮಶಾನ/ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವಸಹಾಯಕರಿಗೆ ಕಡ್ಡಾಯವಾಗಿ ವ್ಯಾಕ್ಸಿನ್ ನೀಡಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಅಲ್ಲದೆ, ಕೈದಿಗಳಿಗೆ, ಅಂಗವೈಕಲ್ಯ ಹೊಂದಿರುವ(ಮಾನಸಿಕ ಅಸ್ವಸ್ಥತೆ ಸೇರಿದಂತೆ) ಫಲಾನುಭವಿಗಳು ಮತ್ತು ಒಬ್ಬ ಆರೈಕೆದಾರರಿಗೆ ಲಸಿಕೆ ನೀಡುವ ಕಾರ್ಯ ಪೂರ್ಣಗೊಳ್ಳಬೇಕು.
ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ 18-44 ವರ್ಷದ ಒಳಗಿನ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ನೀಡುವ ಸಲುವಾಗಿ ಮಂಚೂಣಿ ಕಾರ್ಯಕರ್ತರ ಇಲಾಖಾ ಮುಖ್ಯಸ್ಥರೊಂದಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಸಭೆ ನಡೆಸಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕೋವಿಡ್ ನಿಗ್ರಹಕ್ಕೆ ಮಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರ ಇಲಾಖೆ ಮುಖ್ಯಸ್ಥರು ನೋಡಲ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಬೇಕು.
ನಿಗದಿಪಡಿಸಿದ ದಿನಾಂಕಗಳಂದು ಆಯಾ ಇಲಾಖೆ ಮುಖ್ಯಸ್ಥರು ತಮ್ಮ ವ್ಯಾಪ್ತಿಯ ಕಾರ್ಯಕರ್ತರನ್ನು ಗುರುತಿಸಿ ಪ್ರಮಾಣೀಕರಿಸಿ ಅವರಿಗೆ ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.
ಉಳಿದಂತೆ ನಿಗದಿಪಡಿಸಿದ ಮೇ 23, 24, 25ರಂದು ಲಸಿಕೆ ಲಭ್ಯತೆ ನೋಡಿಕೊಂಡು ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರು, ಪ್ರಸ್ತುತ ಕೋವಿಡ್-19 ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು, ಸರ್ಕಾರಿ ಸಾರಿಗೆ ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರು ಸೇರಿದಂತೆ ಇತರರಿಗೆ ಲಸಿಕೆ ಹಾಕಬೇಕೆಂದು ತಿಳಿಸಿದರು.