ತುಮಕೂರು : ಮಾನವ ಧರ್ಮ ಉಳಿಸಲು ನಾವೆಲ್ಲ ಒಟ್ಟಾಗಿ ಪ್ರಯತ್ನಿಸಬೇಕು. ನಮ್ಮ ಧರ್ಮವನ್ನು ಉಳಿಸಿಕೊಂಡು ಹೋಗಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಜಿಲ್ಲೆಯ ತಾಲೂಕಿನ ನೊಣವಿನಕೆರೆಯಲ್ಲಿ ಆಂಜನೇಯ ದೇಗುಲ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 20 ವರ್ಷದಿಂದ ನಾನು ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಬರುತ್ತಿದ್ದೇನೆ. ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ. ನನಗೂ ಮಠಕ್ಕೂ ಭಕ್ತ ಮತ್ತು ಭಗವಂತನ ಸಂಬಂಧ ಎಂದು ಹೇಳಿದರು.
ರಾಮನ ತಂದೆ ದಶರಥ ಮಹಾರಾಜ. ನಮಗೆ ದಶರಥನ ದೇವಸ್ಥಾನ ಎಲ್ಲಿಯೂ ಸಿಗುವುದಿಲ್ಲ. ಆದರೆ ರಾಮನ ಭಕ್ತ ಹನುಮಂತನ ದೇವಸ್ಥಾನ ಎಲ್ಲಾ ಕಡೆ ಇದೆ. ರಾಮನ ದೇವಸ್ಥಾನಕ್ಕಿಂತ ಹೆಚ್ಚು ಆಂಜನೇಯ ದೇವಸ್ಥಾನ ಇದೆ. ಹೀಗೆ ಯಾಕೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಯಾಕೆಂದರೆ ರಾಮನ ಬಂಟ ಆಂಜನೇಯ. ಆಂಜನೇಯ ಸೇವೆಯ ಪ್ರತೀಕ. ಸ್ವಾಮಿನಿಷ್ಠೆಯ ಪ್ರತೀಕ. ಹಿಂದಿನಿಂದಲೂ ಆಂಜನೇಯ ಸಮಾಜದ ಉದ್ಧಾರಕ್ಕಾಗಿ ಕೆಲಸ ಮಾಡಿದ್ದಕ್ಕೆ ಆತನನ್ನು ಸಮಾಜ ಗುರುತಿಸುತ್ತಿದೆ. ಹಾಗೆಯೇ ಇಂದು ಯಾರು ಸಮಾಜ ಸೇವೆ ಮಾಡುತ್ತಾರೋ ಅವರನ್ನು ಸರ್ಕಾರ ಗುರುತಿಸುತ್ತದೆ. ಇದಕ್ಕೆ ಆಂಜನೇಯನೇ ಪ್ರತ್ಯಕ್ಷ ಸಾಕ್ಷಿ ಎಂದು ಹೇಳಿದರು.