ತುಮಕೂರು:ಕೊರೊನಾ ಮಹಾಮಾರಿ ಹಿಮ್ಮೆಟ್ಟಿಸಲು ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಮಾರ್ಚ್ ಮೊದಲ ವಾರದಿಂದ ಸಕ್ರಿಯವಾಗಿತ್ತು. ಹೀಗಾಗಿ ವೈರಸ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ ಸಫಲವಾಗಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಪ್ರತಿ ಮನೆಯಲ್ಲಿ ಜ್ವರದಿಂದ ಬಳಲುತ್ತಿರುವವರ ಅಂಕಿ-ಅಂಶ ಪಡೆಯಲಾಗಿದೆ. ಕೊರೊನಾ ಮಹಾಮಾರಿ ಹಿಮ್ಮೆಟ್ಟಿಸಲು ತುಮಕೂರಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಮಾರ್ಚ್ ಮೊದಲ ವಾರದಿಂದ ಸಕ್ರಿಯವಾಯಿತು. ರಜಾ ದಿನಗಳಲ್ಲಿಯೂ ಎರಡು ತಾಲೂಕಿಗೆ ಒಂದರಂತೆ ಹಿರಿಯ ವೈದ್ಯಾಧಿಯನ್ನು ನೇಮಕ ಮಾಡಲಾಗಿತ್ತು.
ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ವಿದೇಶಿ ಪ್ರವಾಸಿಗಳು, ರೋಗ ಲಕ್ಷಣಗಳಿರುವ ವ್ಯಕ್ತಿಗಳ ಮಾಹಿತಿಯನ್ನು ಪ್ರತಿ ದಿನ ಸಂಗ್ರಹಿಸಲಾಗಿದೆ. ಅಲ್ಲದೆ ರೋಗ ಪೀಡಿತರೊಂದಿಗೆ ಸಂಪರ್ಕವಿದೆಯೇ ಎಂಬ ಮಾಹಿತಿ ಲಭ್ಯವಾಗಿದ್ದು, ಅಂತಹವರನ್ನು ತಪಾಸಣೆ ಮಾಡಲು ಸಹಕಾರಿಯಾಗಿದೆ.
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆ್ಯಪ್ ಮೂಲಕ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಮೇಲೆ ನಿಗಾ ವಹಿಸಲಾಗಿದ್ದು, ಕಂಟ್ರೋಲ್ ರೂಮ್ನಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದರು.