ಸಚಿವ ಕೆ ಎನ್ ರಾಜಣ್ಣ ಪ್ರತಿಕ್ರಿಯೆ ತುಮಕೂರು: "ಸರ್ಕಾರದಿಂದರೈತರಿಗೆ ಎಕರೆವಾರು ಪರಿಹಾರ ನೀಡುವ ನಿಟ್ಟಿನಲ್ಲಿ ನಾವು ಚಿಂತನೆ ಮಾಡುತ್ತೇವೆ.ಸಾಲ ಮನ್ನಾ ಬದಲಾಗಿ ಆಂಧ್ರಪ್ರದೇಶ ಸರ್ಕಾರದ ಮಾದರಿಯಲ್ಲಿ ರೈತರಿಗೆ ಎಕರೆವಾರು ಪರಿಹಾರ ನೀಡಬೇಕು. ಅಲ್ಲಿ ಐದು ಎಕರೆವರೆಗೂ ಪ್ರತಿ ಎಕರೆಗೆ ಇಷ್ಟು ಅಂತ ಪರಿಹಾರ ನೀಡುತ್ತಾರೆ. ಈ ರೀತಿ ಮಾಡಿದರೆ ಪ್ರತಿ ರೈತನಿಗೂ ಪರಿಹಾರ ಸಿಗುತ್ತದೆ" ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದರು. ನಗರದಲ್ಲಿ ವಿಪಕ್ಷಗಳು ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, "ಸಾಲ ಮನ್ನಾ ಮಾಡಿದರೆ ಸಾಲ ತೆಗೆದುಕೊಂಡ ರೈತರಿಗೆ ಮಾತ್ರ ಅನುಕೂಲವಾಗುತ್ತದೆ" ಎಂದರು.
"ಸಾಲ ತೆಗೆದುಕೊಳ್ಳದೇ ಇರುವ ರೈತರು ಶೇ.40 ರಷ್ಟು ಇದ್ದಾರೆ. ಶೇ.60 ರಷ್ಟು ರೈತರು ಮಾತ್ರ ಸಾಲ ತೆಗೆದುಕೊಳ್ಳುತ್ತಾರೆ. ಅವರಿಗೆ ಸಾಲ ಮನ್ನಾ ಮಾಡಿ ಮತ್ತೆ ಸಾಲ ನೀಡಿದರೆ, ಉಳಿದ ಶೇ.40 ರೈತರು ಏನು ಪಾಪ ಮಾಡಿದ್ದಾರೆ. ಹೀಗಾಗಿ ಎಕರೆವಾರು ಪರಿಹಾರ ನೀಡಬೇಕು. ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ನಾವು ಎಲ್ಲಾ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚರ್ಚೆ ಮಾಡುತ್ತೇವೆ. ನಮ್ಮದು ರೈತಪರ ಸರ್ಕಾರ, ರೈತರು ಸಂಕಷ್ಟಕ್ಕೆ ಸಿಲುಕಿದಾಗ ಅವರಿಗೆ ನೆರವಾಗುತ್ತೇವೆ" ಎಂದು ಹೇಳಿದರು.
ತುಮಕೂರು ಎಂಪಿ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಬಂದರೆ ಸ್ವಾಗತ:"ತುಮಕೂರು ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದರೆ ನಾವು ಸ್ವಾಗತ ಮಾಡುತ್ತೇವೆ. ನೆಹರು ಕುಟುಂಬದಿಂದ ಯಾರೇ ಬಂದರು ಅವರಿಗೆ ಆಶೀರ್ವಾದ ಮಾಡುವ ಜನ ನಮ್ಮ ಜಿಲ್ಲೆಯಲ್ಲಿ ಇದ್ದಾರೆ. ಇದಕ್ಕೆ ಅಜಿತ್ ಪ್ರಸಾದ್ ಜೈನ್ ಅವರ ಗೆಲುವೇ ಉದಾಹರಣೆ. ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿ , ಈ ಬಗ್ಗೆ ಅಂತಿಮ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಒಂದು ವೇಳೆ ರಾಹುಲ್ ಗಾಂಧಿ ಇಲ್ಲಿಗೆ ಬಂದರೆ ಕ್ಷೇತ್ರವನ್ನು ಬಿಟ್ಟುಕೊಡುತ್ತೇನೆ, ಅವರ ಗೆಲುವಿಗೆ ಪ್ರಯತ್ನಿಸುತ್ತೇನೆ" ಎಂದರು.
"ಜಾತಿಗಣತಿ ವರದಿ ಇನ್ನೊಂದು ತಿಂಗಳಲ್ಲಿ ಸರ್ಕಾರದ ಕೈಸೇರಬಹುದು. ಏಕೆಂದರೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರಾವಧಿಯನ್ನು ಜನವರಿಯ ವರೆಗೆ ವಿಸ್ತರಿಸಲಾಗಿದೆ. ಅವರು ಜನವರಿ ಅಂತ್ಯದ ವೇಳೆಗೆ ಜಾತಿಗಣತಿ ವರದಿಯನ್ನು ಸಲ್ಲಿಸುತ್ತಾರೆ ಎಂಬ ನಿರೀಕ್ಷೆ ಇದೆ" ಎಂದು ಹೇಳಿದರು. "ನಿಗಮ ಮಂಡಳಿ ನೇಮಕಾತಿ ಇನ್ನೊಂದು ವಾರದಲ್ಲಿ ಆಗುತ್ತದೆ. ಈ ಬಾರಿ ಶಾಸಕರಿಗೆ ಮಾತ್ರ ನಿಗಮ ಮಂಡಳಿಗಳಿಗೆ ಅವಕಾಶ" ಎಂದು ತಿಳಿಸಿದರು.
ಇದನ್ನೂ ಓದಿ:ರೈತರಿಗೆ ಸೂಕ್ತ ಸಮಯದಲ್ಲಿ ಬರ ಪರಿಹಾರ ಸಿಗದಿದ್ದರೆ ಜಿಲ್ಲಾಧಿಕಾರಿಗಳೇ ಹೊಣೆ: ಸಚಿವ ಕೃಷ್ಣ ಬೈರೇಗೌಡ