ತುಮಕೂರು: ನಗರದ ಹೊರವಲಯದ ಶ್ರೀ ಅತಿಶಯ ಕ್ಷೇತ್ರ ಮಂದರಗಿರಿಯಲ್ಲಿ ಭಾರತದಲ್ಲೇ ಪ್ರಪ್ರಥಮ ವಿಶಿಷ್ಟ ವಾಸ್ತು ರಚನೆಯೊಂದಿಗೆ ಮಹಾವೀರ ತೀರ್ಥಂಕರರ ದಿವ್ಯಾಕಾಶ ಸಮವಶರಣ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸಮವಶರಣದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಸಮಾರಂಭ ಮಾ.8ರಿಂದ 13ರ ವರೆಗೆ ನಡೆಯಲಿದೆ. ಸಹಸ್ರಾರು ಶ್ರಾವಕರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜೈನ ಮುನಿಗಳು, ಮಾತಾಜಿಗಳು, ದಕ್ಷಿಣ ಭಾರತದ ವಿವಿಧ ಜೈನ ಮಠಗಳ ಪೀಠಾಧೀಶರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ದಿಗಂಬರ ಜೈನ ಮುನಿ ಶ್ರೀ ಅಮೋಘ ಕೀರ್ತಿ ಮಹಾರಾಜ್ ಮತ್ತು ಅಮರಕೀರ್ತಿ ಮಹಾರಾಜ್ ಅವರ ನೇತೃತ್ವದಲ್ಲಿ ವಿಭಿನ್ನವಾದ ಶ್ರೀ ದಿವ್ಯಾಕಾಶ ಸಮವಶರಣ ನಿರ್ಮಾಣಗೊಂಡಿದೆ. ಮೂರು ವರ್ಷಗಳಿಂದ ನಿರಂತರವಾಗಿ ಕಾಮಗಾರಿ ನಡೆಯುತ್ತಿದ್ದು, ನೂರಾರು ನುರಿತ ಕುಶಲಕರ್ಮಿಗಳು ಕೆಲಸ ಮಾಡುತ್ತಿದ್ದಾರೆ.
ನುರಿತ ಕುಶಲಕರ್ಮಿಗಳಿಂದ ಕೆತ್ತನೆ: ರಾಜಸ್ಥಾನ, ತಮಿಳುನಾಡು, ಕೇರಳ , ಕಾರ್ಕಳ , ಮಂಗಳೂರು ಭಾಗದಿಂದ ಬಂದಿರುವ ಕುಶಲಕರ್ಮಿಗಳು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಬಹುತೇಕ ಕರ್ನಾಟಕ ರಾಜ್ಯದ ಸ್ಥಳೀಯ ಶಿಲೆಯನ್ನೇ ಸಮವಶರಣ ನಿರ್ಮಿಸಲು ಬಳಸಿಕೊಳ್ಳಲಾಗಿದೆ. ಅದರಲ್ಲೂ ವಿಶೇಷವಾಗಿ ಒರಿಸ್ಸಾದಿಂದ ಬಂದ ನುರಿತ ಕುಶಲಕರ್ಮಿಗಳು ಸುಂದರವಾದ ಮಹಾವೀರ ತೀರ್ಥಂಕರ ಮೂರ್ತಿಗಳ ಕೆತ್ತನೆ ಮಾಡಿದ್ದಾರೆ. ಧ್ಯಾನಸ್ಥ ಮುಖ ಹೊಂದಿರುವ ನಾಲ್ಕು ಮಹಾವೀರ ತೀರ್ಥಂಕರರ ಮೂರ್ತಿಗಳು ಬರೋಬ್ಬರಿ ಐದು ಟನ್ ತೂಕದಿಂದ ಕೂಡಿವೆ.
ಪಂಚಕಲ್ಯಾಣ ಮಹೋತ್ಸವ:ಮಾ.8ರಿಂದ ಆರಂಭವಾಗಲಿರುವ ಪಂಚಕಲ್ಯಾಣ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ ವೈ ವಿಜಯೇಂದ್ರ ವಹಿಸಲಿದ್ದಾರೆ. ಶ್ರೀ ಅಮೋಘಕೀರ್ತಿ ಮಹಾರಾಜ್ ಮತ್ತು ಅಮರಕೀರ್ತಿ ಅಮೋಘಮಹಾರಾಜ್ ಮತ್ತು ವಿವಿಧ ಮಠಗಳ ಭಟ್ಟಾರಕ ಪಟ್ಟಾಚಾಯರು ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀ ಸುರೇಂದ್ರಕುಮಾರ್, ರಾಕೇಶ್ ಜೈನ್, ಶ್ರೀ ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಸ್.ಜೆ. ನಾಗರಾಜ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುವರು. ಮಾ.9ರಂದು ಗರ್ಭಕಲ್ಯಾಣ ಮಹೋತ್ಸವ, ಮಾ.10ರಂದು ಜನ್ಮ ಕಲ್ಯಾಣ ಮಹೋತ್ಸವ, ಮಾ.11ರಂದು ದೀಕ್ಷಾ ಕಲ್ಯಾಣ ಮಹೋತ್ಸವ, ಮಾ.12ರಂದು ಕೇವಲಜ್ಞಾನ ಕಲ್ಯಾಣ, ಮಾ.13ರಂದು ಮೋಕ್ಷ ಕಲ್ಯಾಣ ಮಹೋತ್ಸವ ನಡೆಯಲಿದೆ. ಪ್ರತಿ ದಿನ ಸಂಜೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮ ಜರುಗಲಿವೆ.