ತುಮಕೂರು:ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಪ್ರಚಾರದ ಭರಾಟೆ ಭರ್ಜರಿಯಾಗಿ ನಡೆದಿದೆ. ಇದರಲ್ಲಿ ಮುಖ್ಯವಾಗಿ ನಿರ್ದಿಷ್ಟ ಸಮುದಾಯದ ಮತಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಿವೆ.
ಅದರಲ್ಲೂ ಕಾಡುಗೊಲ್ಲ ಸಮುದಾಯದ ಮತಗಳನ್ನು ತಮ್ಮತ್ತ ಸೆಳೆಯಲು ಈಗಾಗಲೇ ಬಿಜೆಪಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಘೋಷಣೆ ಮಾಡಿದೆ. ಇನ್ನೊಂದೆಡೆ ಕಾಂಗ್ರೆಸ್ ಕೂಡ ಈ ಕಾಡುಗೊಲ್ಲ ಸಮುದಾಯದ ಮತಗಳನ್ನು ಸೆಳೆಯಲು ಇಂದು ಶಿರಾ ಪಟ್ಟಣದಲ್ಲಿ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಕರೆದಿತ್ತು.
ಈಗಾಗಲೇ ಶಿರಾ ವಿಧಾನಸಭಾ ಕ್ಷೇತ್ರವನ್ನು ಶತಾಯಗತಾಯ ಗೆಲ್ಲಲು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಒಟ್ಟಾಗಿದ್ದು ಅವರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಪ್ರಮುಖವಾಗಿತ್ತು. ಡಾ. ಜಿ. ಪರಮೇಶ್ವರ್, ಕೆ ಎನ್ ರಾಜಣ್ಣ, ಚಿತ್ರದುರ್ಗ ಸಂಸದ ಚಂದ್ರಪ್ಪ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಕಾಡುಗೊಲ್ಲ ಸಮುದಾಯದ ಮತಗಳನ್ನು ಸೆಳೆಯಲು ವೇದಿಕೆಯಲ್ಲಿ ಶಕ್ತಿ ಪ್ರದರ್ಶನ ನಡೆಸಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಡುಗೊಲ್ಲ ಸಮುದಾಯದವರು ಚುನಾವಣೆಯಲ್ಲಿ ನನಗೆ ಹೆಚ್ಚಿನ ಮತ ಚಲಾವಣೆ ಮಾಡಿದ್ದರಿಂದಲೇ ನನ್ನ ಗೆಲುವು ಸಾಧ್ಯವಾಯಿತು ಎಂದು ಶಾಸಕರಾಗಿರುವ ಡಾ ಜಿ ಪರಮೇಶ್ವರ್ ಸಭೆಯಲ್ಲಿ ತಿಳಿಸಿದರು.
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದ ಸಮುದಾಯವೇ ಕಾಡುಗೊಲ್ಲ ಸಮುದಾಯವಾಗಿದೆ. ಶಿರಾ ವಿಧಾನಸಭಾ ಕ್ಷೇತ್ರದಲ ಉಪಚುನಾವಣೆಯಲ್ಲಿ ಕಾಡು ಗೊಲ್ಲ ಸಮುದಾಯ ಸಾಕಷ್ಟು ಪ್ರಾಮುಖ್ಯತೆ ಹೊಂದಿದೆ. ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಡು ಗೊಲ್ಲ ಸಮುದಾಯ ಬಹುಹಿಂದಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದೆ ಹೀಗಾಗಿ ಈ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷವು ಚಿರಋಣಿಯಾಗಿರುತ್ತದೆ ಎಂದು ತಿಳಿಸಿದರು.