ತುಮಕೂರು :ಇದು ಯಾವ ಸಿನಿಮಾಗಿಂತಲೂ ಕಡಿಮೆಯೇನಿಲ್ಲ. ಪಕ್ಕಾ ಸಿನಿಮೀಯ ಸ್ಟೈಲ್‌ನಲ್ಲಿಯೇ ವಧುವೊಬ್ಬಳು ಹಸೆಮಣೆ ಏರುವ ಮೊದಲೇ ಮದುವೆಯಾಗಬೇಕಿದ್ದ ವರನಿಗೆ ಕೈಕೊಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಕೈಹಿಡಿಯೋ ಟೈಮ್‌ಗೇ ಕೈಕೊಟ್ಹೋದ್ಳಪ್ಪೋ.. ತುಮಕೂರಿನಲ್ಲಿ ಹಸೆಮಣೆ ಏರುವ ಮೊದ್ಲೇ ವಧು ಪ್ರಿಯಕರನೊಂದಿಗೆ ಪರಾರಿ! - ಶಿರಾ
ಶಿರಾ ತಾಲೂಕಿನ ಮಳೆಕೋಟೆ ಗ್ರಾಮದಲ್ಲಿ ಇಂತಹ ಒಂದು ಸಿನಿಮೀಯ ಸ್ಟೈಲ್ ಘಟನೆ ನಡೆದಿದೆ.ಮಳೆಕೋಟೆ ಗ್ರಾಮದ ಯುವತಿ ಜತೆಗೆ ದೊಡ್ಡಗೂಳ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಅಲ್ಲದೆ ಇಂದು ಮಾಂಗಲ್ಯಧಾರಣೆ ಕಾರ್ಯಕ್ರಮವೂ ನಿಶ್ಚಯವಾಗಿತ್ತು. ನಿನ್ನೆ ರಾತ್ರಿ ವಿಷ ಕುಡಿಯೋ ನಾಟಕವಾಡಿದ್ದ ವಧು, ವಿಷವನ್ನ ಮೈಮೇಲೆ ಚೆಲ್ಲಿಕೊಂಡು ಹೈಡ್ರಾಮಾ ಮಾಡಿದ್ದಳು. ಇದನ್ನು ನಂಬಿದ ಕುಟುಂಬಸ್ಥರು ವಧುವನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದರು.
ಈ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ವಧು ಮತ್ತು ಆಕೆಯ ಪ್ರಿಯಕರ ಚೇತನ್ ಆಸ್ಪತ್ರೆಯಿಂದಲೇ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ. ಚೇತನ್ ವಧುವಿನ ಅತ್ತೆಯ ಮಗ ಎಂದು ಹೇಳಲಾಗಿದೆ. ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.