ತುಮಕೂರು:ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರುತ್ತಿದೆ. ಮುಖ್ಯವಾಗಿ ಕಾಂಗ್ರೆಸ್ ಅಸಮಾಧಾನಿತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ತಂತ್ರಗಾರಿಕೆಗೆ ಬಿಜೆಪಿ ಮುಂದಾಗಿದೆ. ಇದು ಜೆಡಿಎಸ್ ಪಾಳಯದಲ್ಲಿ ತಳಮಳ ಸೃಷ್ಟಿಸಿದೆ
ಈಗಾಗಲೇ ಮೈತ್ರಿ ಅಭ್ಯರ್ಥಿ ಜೆಡಿಎಸ್ನ ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರು ಕಣಕ್ಕಿಳಿದರೆ, ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿ ಕಾಂಗ್ರೆಸ್ ಮುಖಂಡ ರಾಜಣ್ಣ ನಾಮಪತ್ರ ಸಲ್ಲಿಸಿದ್ದರು. ಪಕ್ಷದ ಹೈಕಮಾಂಡ್ ಒತ್ತಾಯದ ಮೇರೆಗೆ ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದಿದ್ದರು. ಹೀಗಿದ್ದರೂ ಹಲವು ದಿನಗಳವರೆಗೂ ಕೂಡ ಜಂಟಿ ಪ್ರಚಾರ ಸಭೆಯಲ್ಲಿ ರಾಜಣ್ಣ ಭಾಗಿಯಾಗಿರಲಿಲ್ಲ, ಒಳಗೊಳಗೇ ಒಂದು ರೀತಿಯ ಅಸಮಾಧಾನ ಹೊಗೆಯಾಡುತ್ತಲೇ ಇತ್ತು. ಒಂದು ಹಂತದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಮೇಲ್ನೋಟಕ್ಕೆ ಎರಡೂ ಪಕ್ಷಗಳ ಮುಖಂಡರು ಹೇಳಿಕೆ ನೀಡಿದ್ದರು.
ಈ ಬೆಳವಣಿಗೆಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ತಂತ್ರಗಾರಿಕೆಗೆ ಬಿಜೆಪಿ ಮುಂದಾಗಿದೆ ಎಂಬ ಅನುಮಾನಗಳು ದಟ್ಟವಾಗಿವೆ. ಇಂದು ಮಧುಗಿರಿಯಲ್ಲಿ ಬೃಹತ್ ರೋಡ್ ಶೋ ನಡೆಸಿದ ಬಿಜೆಪಿ ಮುಖಂಡರು, ಕೆ.ಎನ್ ರಾಜಣ್ಣರ ಬೆಂಬಲ ಬಿಜೆಪಿ ಅಭ್ಯರ್ಥಿ ಜಿ. ಎಸ್ ಬಸವರಾಜ್ ಅವರಿಗಿದೆ. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ರಾಜಣ್ಣ ನಮಗೆ ಬೆಂಬಲ ನೀಡ್ತಾರೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಗ್ಗೆ ಬೇಸರ ಇರುವುದಾಗಿ ರಾಜಣ್ಣ ಹೇಳುತ್ತಿದ್ದು, ಹಾಗಾಗಿ ಆಂತರಿಕವಾಗಿ ನಮಗೆ ಬೆಂಬಲ ನೀಡುತ್ತಾರೆ ಎಂದು ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.