ತುಮಕೂರು:ಬೈಕ್ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಬಳಿ ನಡೆದಿದೆ. ಮೃತರನ್ನು ಯಶಸ್ವಿನಿ, ಅಭಿಲಾಶ್ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿದ್ದ ಈ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಇಬ್ಬರು ಕಾಲೇಜು ಮುಗಿಸಿ ಬೈಕ್ ನಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಗುಬ್ಬಿಯಲ್ಲಿರುವ ಸಿಐಟಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ‘ಇ’ ಅಂಡ್ ‘ಸಿ’ ಬ್ರಾಂಚ್ ನ ದ್ವಿತೀಯ ವರ್ಷದ ಇಂಜಿನಿಯರಿಂಗ್ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸದ್ಯ ಈ ಸಂಬಂಧ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನಲ್ಲಿ ಪೊಲೀಸ್ ಠಾಣೆ ಮುಂಭಾಗವೇ ಅಪಘಾತ:ನಂಜನಗೂಡು ಟ್ರಾಫಿಕ್ ಪೊಲೀಸ್ ಠಾಣೆ ಮುಂಭಾಗವೇ ಪೊಲೀಸ್ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ಸಮಯದಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಬಳಿ ನಿನ್ನೆ ರಾತ್ರಿ 9 ಗಂಟೆಯ ಸಮಯದಲ್ಲಿ, ನಗರದ ಪೋಲಿಸ್ ಸ್ಟೇಷನ್ ಎದುರೇ ಪೋಲಿಸ್ ಜೀಪ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ತಾಲೂಕಿನ ಸಿಂದುವಳ್ಳಿ ಗ್ರಾಮದ ಯುವಕ ಅಭಿ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈತ ನಂಜನಗೂಡಿನಿಂದ ಗುಂಡ್ಲುಪೇಟೆ- ಊಟಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಂಧುವಳ್ಳಿ ಗ್ರಾಮಕ್ಕೆ ತನ್ನ ಪಲ್ಸರ್ ಬೈಕ್ KA-09 HM2984 ರಲ್ಲಿ ತೆರಳುವ ವೇಳೆ ನಂಜನಗೂಡು ಟ್ರಾಫಿಕ್ ಪೊಲೀಸ್ ಠಾಣೆ ಒಳಗಿನಿಂದ ಬಂದ ಪೊಲೀಸ್ ಜೀಪ್ ಡಿಕ್ಕಿ ಹೊಡೆದಿದೆ. ಇದರಿಂದ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಪೊಲೀಸ್ ಜೀಪ್ ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಈ ಸ್ಥಳದಲ್ಲಿ ಕೆ.ಎಚ್.ಬಿ ಕಾಲೋನಿಗೆ ತಿರುಗುವ ಮಾರ್ಗ ಇದ್ದು, ಸಾಕಷ್ಟು ಅವಘಡಗಳು ಉಂಟಾಗಿದೆ. ಈ ಜಾಗದಲ್ಲಿ ಬ್ಯಾರಿಕೇಡ್ ಅಥವಾ ಇನ್ನಿತರೆ ಕ್ರಮಗಳನ್ನು ಪೊಲೀಸರು ಕೈಗೊಳ್ಳದಿರುವುದೆ ಅಪಘಾತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮತ್ತೆ ರೌಡಿಶೀಟರ್ ಅಟ್ಟಹಾಸ:ಮಾಮೂಲಿ ಕೊಡಲಿಲ್ಲ ಎಂಬ ಕಾರಣಕ್ಕೆ ಉದ್ಯಮಿಯ ಕಾರನ್ನು ರೌಡಿಶೀಟರ್ ಕೊಂಡೊಯ್ದು ಜಖಂಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಆತನ ವಿರುದ್ಧ 20ಕ್ಕೂ ಅಧಿಕ ಪ್ರಕರಣಗಳಿವೆ. ಎರಡು ವರ್ಷಗಳ ಹಿಂದೆ ಪೊಲೀಸರಿಂದ ಗುಂಡೇಟು ತಿಂದು ಗೂಂಡಾ ಕಾಯ್ದೆಯಡಿ ಜೈಲುಪಾಲಾದವನು ಈಗ ಮತ್ತೆ ತನ್ನ ಹಳೆ ಚಾಳಿ ಮುಂದುವರೆಸಿದ್ದಾನೆ.